ಶಿರಸಿ:ಶ್ರೇಷ್ಠವಾದ ವೈದಿಕ ಧರ್ಮದ ಆಧಾರ ಸ್ತಂಭಗಳಾಗಿ ವೈದಿಕರಾಗಿರುವುದರಿಂದ, ಈ ಧರ್ಮ ದುರ್ಬಲವಾಗದಂತೆ ವೈದಿಕರು ಸದೃಢರಾಗಿರಬೇಕು ಎಂದು ಸ್ವರ್ಣವಲ್ಲೀ ಮಹಾಸಂಸ್ತಾನದ ಶ್ರೀಮದ್ ಗಂಗಾಧರೇಂದ್ರ ಶ್ರೀಗಳವರು ತಿಳಿಸಿದರು.
ತಾಲೂಕಿನ ಧೋರಣಗಿರಿ ಮಠದ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಮೆಣಸೀ ಸೀಮಾ ಪರಿಷತ್, ಹವ್ಯಕ ಜಾಗೃತಿ ಕಾರ್ಯಪಡೆ, ಮಾತೃ ಮಂಡಳಿ, ಯುವ ಪರಿಷತ್ ಹಾಗೂ ಸೀಮಾ ವೈದಿಕ ಪರಿಷತ್ ಸಹಯೋಗದಲ್ಲಿ ಮಾ.13 ರಂದು ನಡೆದ ಶ್ರೀ ಲಕ್ಷ್ಮೀ ನರಸಿಂಹ ಜಪ ಹಾಗೂ ಹವನದ ನಂತರ ನಡೆದ ಸಭೆಯ ಸಾನಿಧ್ಯ ವಹಿಸಿ, ಆಶೀರ್ವದಿಸಿದ ಶ್ರೀಗಳು, ಮೃತ್ಯು ನಿವಾರಕ ಹಾಗೂ ರೋಗ ನಿವಾರಕವಾದ ಶ್ರೀ ಲಕ್ಷ್ಮೀನರಸಿಂಹ ಮಂತ್ರಾನುಷ್ಠಾನಗಳು ನಿರಂತರವಾಗಿ ಮಠ- ಮಂದಿರಳಲ್ಲಿ ನಡೆಯುತ್ತಿದ್ದರೆ ಶ್ರೇಷ್ಠವಾದ ವೈದಿಕ ಧರ್ಮ ಸದೃಢವಾಗಿರಲು ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ, ಮೈಸೂರಿನ ಶ್ರೀ ಮಹಾರಾಜ ಸಂಸ್ಕೃತ ಮಹಾವಿದ್ಯಾಲಯದಲ್ಲಿ ನಿವೃತ್ತ ಪ್ರಾಧ್ಯಾಪಕರಾದ ಮಂಜುನಾಥ ಭಟ್ಟ, ಕೊಡ್ಲೆಕೆರೆ ಅವರನ್ನು ವೈದಿಕ ಪರಿಷತ್ ವತಿಯಿಂದ ಶ್ರೀಗಳು ಸಮ್ಮಾನಿಸಿದರು.
ವೈದಿಕ ಪರಿಷತ್‍ನ ಕಾರ್ಯಚಟುವಟಿಕೆಗಳ ಕುರಿತಾಗಿ ಪ್ರಾಸ್ತಾವಿಕವಾಗಿ ಅನಂತ ಗೋ. ಭಟ್ಟ ಗೋಣ್ಸರಮಠ ಮಾತನಾಡಿ ಸ್ವಾಗತಿಸಿದರು. ಶ್ರೀಕಾಂತ ಸು. ಭಟ್ಟ, ಹೆಗ್ಗದ್ದೆ ಸಮ್ಮಾನಿತ ಮಂಜುನಾಥ ಭಟ್ಟ ಕೊಡ್ಲೆಕರೆ ಅವರ ಸಾಧನೆಗಳ ಕುರಿತು ಮಾತನಾಡಿದರು.