ಹೊನ್ನಾವರ: ಅರಣ್ಯವಾಸಿಗಳಿಗೆ ಜಾಗೃತೆ ಮೂಡಿಸುವ ಹಾಗೂ ಅರಣ್ಯವಾಸಿಗಳ ಸಮಸ್ಯೆಗಳಿಗೆ ಸ್ಫಂದಿಸುವ ದಿಶೆಯಲ್ಲಿ ತಾಲೂಕಿನಲ್ಲಿ ಹಮ್ಮಿಕೊಳ್ಳಲಾದ ಅರಣ್ಯವಾಸಿಗಳನ್ನು ಉಳಿಸಿ ಜಾಥವು ಏಂಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ, ಮೂವತ್ತೊಂದು ಹಳ್ಳಿಗಳಲ್ಲಿ ಯಶಸ್ವಿಯಾಗಿ ಪ್ರಥಮ ಹಂತದ ಜಾಥ ಕಾರ್ಯವು ಜರುಗಿತು.
ಅನಾಧಿಕಾಲದಿಂದ ಅರಣ್ಯವಾಸಿಗಳ ಭೂಮಿ ಹಕ್ಕಿಗಾಗಿ ಜರುಗುತ್ತಿರುವ ಸಮಸ್ಯೆಗಳನ್ನ ಚರ್ಚಿಸುವುದೊಂದಿಗೆ ಮಾರ್ಚ ೧೨ ಮತ್ತು ೧೩ ರಂದು ಜಾಥ ಸಂದರ್ಭದಲ್ಲಿ ಅರಣ್ಯ ಭೂಮಿ ಹಕ್ಕಿಗೆ ಸಂಬಂಧಿಸಿದ ಕಾನೂನಾತ್ಮಕ ಅಂಶಗಳನ್ನು ಅರಣ್ಯವಾಸಿಗಳಿಗೆ ತಿಳುವಳಿಕೆ ನೀಡಲಾಗಿದ್ದು, ಅರಣ್ಯ ಸಿಬ್ಬಂದಿಗಳ ದೌರ್ಜನ್ಯದ ಕುರಿತು ಜಾಥ ಸಂದರ್ಭದಲ್ಲಿ ಹೋರಾಟಗಾರರ ವೇದಿಕೆಯು ಸ್ಫಂದಿಸುವುದು ವಿಶೇಷವಾಗಿತ್ತು.
ಅರಣ್ಯ ಹಕ್ಕು ಕಾಯಿದೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿ ಸುಫ್ರೀಂ ಕೋರ್ಟ ಇನ್ನಿತರ ರಾಜ್ಯಗಳ ಅರಣ್ಯ ಅತಿಕ್ರಮಣ ಖುಲ್ಲಾ ಪಡಿಸುವ ಆದೇಶದಿಂದ ಆತಂಕಕ್ಕೆ ಒಳಗಾಗಿರುವ ಅರಣ್ಯವಾಸಿಗಳಿಗೆ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಸಾಗುವಳಿ ಹಕ್ಕು ಪಡೆಯುವ ಕುರಿತು ಕಾನೂನಾತ್ಮಕ ಅಂಶವನ್ನು ಜಾಥ ಸಂದರ್ಭದಲ್ಲಿ ವಿಶ್ಲೇಷಿಸಿರುವುದು ಗಮನಾರ್ಹ.
ಜಾಥ ಸಂದರ್ಭದಲ್ಲಿ ಅರಣ್ಯ ಸಿಬ್ಬಂದಿಗಳಿಂದ ಅರಣ್ಯವಾಸಿಗಳ ಸಾಗುವಳಿ ಪ್ರದೇಶಕ್ಕೆ ದೌರ್ಜನ್ಯವೆಸಗಿದಂತಹ ಹತ್ತಕ್ಕೂ ಹೆಚ್ಚು ಸ್ಥಳಗಳಿಗೆ ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತ್ರತ್ವದ ನಿಯೋಗವು ಭೇಟಿಕೊಟ್ಟಿತ್ತು.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ನೇತ್ರತ್ವದಲ್ಲಿ ಹೊನ್ನಾವರದಲ್ಲಿ ಜರುಗಿದ ಜಾಥದಲ್ಲಿ ನಗರ ಅರಣ್ಯ ಅತಿಕ್ರಮಣ ಹೋರಾಟದ ಅಧ್ಯಕ್ಷರಾದ ಸುರೇಶ ಮೇಸ್ತ, ಜಿಲ್ಲಾ ಸಂಚಾಲಕ ರಾಮು ಮರಾಠಿ, ವಿನೋಧ ನಾಯ್ಕ, ಗಣೇಶ ನಾಯ್ಕ, ದಿನೇಶ, ಸುರೇಶ್ ನಾಯ್ಕ ವಕೀಲ, ಗಿರೀಶ ನಾಯ್ಕ, ರಾಜು ನಾಯ್ಕ ಗೆರಸೊಪ್ಪ, ಮೋಹನ ಮೇಸ್ತ, ದಾವುದ್ ಸಾಬ ಪಿಟಿ ನಾಯ್ಕ ಮುಂತಾದವರು ನೇತ್ರತ್ವ ವಹಿಸಿದ್ದರು.
ಸಮಸ್ಯೆಗಳ ಸ್ಫಂದನೆ ಅದಾಲತ್:
ಅರಣ್ಯವಾಸಿಗಳ ಸಮಸ್ಯೆಗಳಿಗೆ ಸ್ಫಂದಿಸಿ ಅರಣ್ಯವಾಸಿಗಳಿಗೆ ಉಂಟಾಗಿರುವ ಕಾನೂನಾತ್ಮಕ ಅಂಶ, ಮಂಜೂರಿ ಪ್ರಕ್ರಿಯೆ, ದಾಖಲೆಗಳ ಸಂಗ್ರಹ ಹಾಗೂ ಕಾನೂನಿನ ಮೌಲ್ಯತೆಗಳ ಕುರಿತು ಅರಣ್ಯವಾಸಿಗಳೊಂದಿಗೆ ಸಮಸ್ಯೆಗಳ ಸ್ಫಂದನ ಅದಾಲತ್ ಏರ್ಪಡಿಸಲಾಗಿತ್ತು.