ಶಿರಸಿ: ತಾಲೂಕಿನ ಹುಲೇಕಲ್ ರಸ್ತೆಯಲ್ಲಿರುವ ಕಲ್ಗಾರ್ ಒಡ್ಡಿನ ಮನೆಯಂಗಳದಲ್ಲಿ ಸಂಘಟಿಸಲಾಗಿದ್ದ ಗಾನವೈಭವ ಐದುನೂರಕ್ಕೂ ಮಿಕ್ಕಿ ಸೇರಿದ್ದ ಕಲಾಭಿಮಾನಿಗಳ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.
ನಿರಂತರವಾಗಿ ಕಳೆದ 6 ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಗಾನವೈಭವದಲ್ಲಿ ಯಾವುದೇ ಭಾಷಣ ಸಮಾರಂಭವಿಲ್ಲದೆ ಯಕ್ಷಗಾನದ ಬೆಡಗು ಮತ್ತು ತೆಂಕು ಶೈಲಿಯ ಕಲಾವಿದರ ಕೂಡುವಿಕೆಯಲ್ಲಿ ಕಾರ್ಯಕ್ರಮ ವೈವಿಧ್ಯಮಯವಾಗಿ ನಡೆಯಿತು.
ಖ್ಯಾತ ಭಾಗವತರಾದ ರಾಘವೇಂದ್ರ ಆಚಾರ್ಯ ಜನ್ಸಾಲೆ ಹಾಗೂ ತೆಂಕು ಶೈಲಿಯ ಕಾವ್ಯಶ್ರೀ ಗುರುಪ್ರಸಾದ ಆಜೆರುರವರು ಅನೇಕ ಜನಪ್ರಿಯ ಪದ್ಯಗಳ ದ್ವಂದ್ವ ಗಾಯನದ ಮೂಲಕ ಅಭಿಮಾನಿಗಳಿಗೆ ಕಲಾ ರಸದೂಟ ನೀಡಿದರು.
ಪೀಠಿಕೆ ಹಾಗೂ ಶೃಂಗಾರ ರಸದಲ್ಲಿ ಪೌರಾಣಿಕ ಪ್ರಸಂಗದ ಆಯ್ದ ಪದ್ಯವನ್ನು ಇಬ್ಬರು ಭಾಗವತರು ಎಕಮೇವವಾಗಿ ಹಾಡುತ್ತಾ ದ್ವಂದ್ವವಾಗಿ ಜನಾಪೇಕ್ಷೆಯ ಮೇರೆಗೆ ಬಂದ ಪ್ರಸಂಗದ ಹಾಡುಗಳನ್ನು ಸುಂದರವಾಗಿ ಹಾಡಿದರು. ಕೇವಲ ಯಕ್ಷ ಪದ್ಯವೊಂದೆ ಅಲ್ಲದೆ, ಅದರ ಶೈಲಿಯಲ್ಲಿಯೇ ಪರಿಸರ ಗೀತೆ, ಭಕ್ತಿ ಪ್ರಧಾನ ಹಾಡು ಕೂಡಾ ಒಂದೆರಡು ಹಾಡಲ್ಪಟ್ಟಿದ್ದು ವಿಶೇಷ.
ಭಾಗವತರ ಹಾಡುಗಳಿಗೆ ಅಷ್ಟೇ ಸುಂದರವಾಗಿ ಆಯಾ ಹಾಡಿಗೆ ತಕ್ಕಂತೆ ಮದ್ದಲೆ ವಾದನದಲ್ಲಿ ಹೆಸರಾಂತ ಬಹುಮುಖ ವ್ಯಕ್ತಿತ್ವ ಕಲಾವಿದ ಎ.ಬಿ.ಪಾಠಕರವರು ಹಾಗೂ ತೆಂಕು ಶೈಲಿಯಲ್ಲಿ ಚಂದ್ರಶೇಖರ ಗುರುವಾಯನಕೆರೆ ಸಾಥ್ ನೀಡಿದರೆ ಚಂಡೆ ವಾದನದಲ್ಲಿ ಗಣೇಶ ಗಾಂವ್ಕರ ಹಳವಳ್ಳಿ ಮತ್ತು ಪ್ರಸನ್ನ ಭಟ್ಟ ಹೆಗ್ಗಾರ ಸಹಕರಿಸಿದರು.
ಪ್ರತಿಯೊಂದು ಹಾಡಿನ ವಿವರಣೆಯನ್ನು ನಿರೂಪಕ ನಾಗರಾಜ ಹೆಗಡೆ ಕವಲಕ್ಕಿ ಸಮರ್ಥವಾಗಿ ನೀಡಿದರು.ಆರಂಭಿಕವಾಗಿ ಸ್ಪಂದನಾ ಭಟ್ಟ ಪ್ರಾರ್ಥಿಸಿದರೆ, ವೈದಿಕ ಮಂಜುನಾಥ ಭಟ್ಟ ತೈಲಗಾರ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ಮಧ್ಯದಲ್ಲಿ ಆಯೋಜಕರಾದ ಕಲ್ಗಾರ್ ಒಡ್ಡಿನ ಕೃಷಿಕರಾದ ಮಂಜುನಾಥ ಭಟ್ಟ ದಂಪತಿ ಮತ್ತು ದಿನೇಶ ಭಟ್ಟ ದಂಪತಿ ಎಲ್ಲ ಕಲಾವಿದರನ್ನು ಶಾಲು ಹೊದೆಸಿ ತಾಂಬೂಲ ಸ್ಮರಣಿಕೆಯೊಂದಿಗೆ ಸನ್ಮಾನಿಸಿದರೆ, ಶಿವನು ಭಿಕ್ಷಕೆ ಬಂದ ಜನಪ್ರಿಯ ಹಾಡಿನೊಂದಿಗೆ ಭಾಗವತ ದ್ವಯರು ಒಟ್ಟಾರೆ ಕಾರ್ಯಕ್ರಮ ಸಮಾಪ್ತಿಗೊಳಿಸಿದರು.