ಶಿರಸಿ:ಸಮಗ್ರ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನಿಂದ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಾವೇರಿಯಲ್ಲಿ ನಡೆಸಲಾಗುತ್ತಿದೆ. ಭಾವೈಕ್ಯತೆ, ಸಂಸ್ಕೃತಿ ಮತ್ತು ಪರಂಪರೆಗೆ ಹೆಸರಾಗಿರುವ ಏಲಕ್ಕಿ ನಾಡು ಎಂದು ಹೆಸರುವಾಸಿಯಾಗಿರುವ ಹಾವೇರಿಯಲ್ಲಿ 2022ರ ಮೇ ತಿಂಗಳಿನಲ್ಲಿ ಸಮ್ಮೇಳನ ನಡೆಸಲು ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
ಈ ನುಡಿಜಾತ್ರೆಯಲ್ಲಿ ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜನಪದ ಇವುಗಳ ಜೊತೆಗೆ ಕನ್ನಡ-ಕನ್ನಡಿಗ-ಕನಾಟಕದ ರಕ್ಷಣೆ ಮತ್ತು ಅಭಿವೃದ್ಧಿಯ ಬಗ್ಗೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತಿದೆ. ಈ ದೆಸೆಯಲ್ಲಿ ಹೆಮ್ಮೆಯ ಕನ್ನಡಿಗರೆಲ್ಲರೂ ಹಾವೇರಿಯಲ್ಲಿ ಜರುಗಲಿರುವ ಈ ಸಮ್ಮೇಳನದಲ್ಲಿ, ತಮ್ಮನ್ನು ತಾವು ಸ್ವ-ಇಚ್ಛೆಯಿಂದ ತೊಡಗಿಸಿಕೊಳ್ಳಬೇಕೆಂಬ ಆಶಯ ಪರಿಷತ್ತಿನದಾಗಿದೆ. ಸಮ್ಮೇಳನಕ್ಕೆ ಪ್ರತಿಯೊಬ್ಬ ಕನ್ನಡಿಗರ ಸಹಭಾಗಿತ್ವ ಇರಬೇಕು ಎನ್ನುವ ಸದುದ್ದೇಶದಿಂದ ಕನ್ನಡಿಗರೆಲ್ಲರೂ ಸಹಾಯ, ಸಹಕಾರ, ಸಹಯೋಗ ನೀಡಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ವಿನಯದಿಂದ ಸಾರ್ವಜನಿಕರಲ್ಲಿ ಕೋರಿದ್ದಾರೆ.
ಈ ಹಿನ್ನೆಲೆಯಲ್ಲಿ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತು ಹಾಗೂ ಹಾವೇರಿ ಜಿಲ್ಲೆಗೆ ಸಂಬಂಧಿಸಿದಂತಹ ಆಶಯ ಕವಿತೆಗಳನ್ನು ರಚಿಸಿ ಪರಿಷತ್ತಿಗೆ ಕಳಿಸಬಹುದಾಗಿದೆ. ತಾವು ರಚಿಸುವ ಕವಿತೆಗಳು ಈ ಹಿಂದೆ ಎಲ್ಲಿಯೂ ಪ್ರಕಟಗೊಂಡಿರಬಾರದು. ಸಾಹಿತ್ಯ, ಸಂಸ್ಕೃತಿ, ಜನ-ಜೀವನ, ಕನ್ನಡ ನಾಡು, ನುಡಿ ಇತ್ಯಾದಿಗಳ ಕುರಿತ ಸ್ವರಚಿತ ಕವನಗಳನ್ನು ರಚಿಸಲು ಕೋರಿದ್ದು, ಅವುಗಳಲ್ಲಿ ಉತ್ತಮ ಕವಿತೆಗಳನ್ನು ಆಯ್ಕೆ ಮಾಡಲಾಗುವುದು. ಆಯ್ಕೆಗೊಂಡ ಕವನಗಳಿಗೆ ಸೂಕ್ತ ಗೌರವವನ್ನು ಸಲ್ಲಿಸಲಾಗುವುದು.
ಈ ಸಂಬಂಧ ಮಾ. 31 ರೊಳಗಾಗಿ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ,ಬೆಂಗಳೂರು-560018 (ಇ-ಮೇಲ್ : kannadaparishattu@gmail.com) ಈ ವಿಳಾಸಕ್ಕೆ ಕಳಿಸಲು ಪ್ರಕಟಣೆ ತಿಳಿಸಿದೆ.