ಹಳಿಯಾಳ: ಕಾಳಿ ನದಿ ನೀರನ್ನು ಉತ್ತರ ಕರ್ನಾಟಕದ ಐದು ಜಿಲ್ಲೆಗಳಿಗೆ ಹರಿಸುವ ಯೋಜನೆಯನ್ನು ಕೈಬಿಡುವಂತೆ ಒತ್ತಾಯಿಸಲು ಹಳಿಯಾಳ ಮತಕ್ಷೇತ್ರದ ಮಾಜಿ ಶಾಸಕ ಸುನೀಲ ಹೆಗಡೆ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಸಮಸ್ಯೆಗಳ ಕುರಿತು ಚರ್ಚಿಸಿ ಇಂದು ಮನವಿ ಸಲ್ಲಿಸಿದರು.
ಕಾಳಿ ನದಿಯು ನಾಲ್ಕು ಜಲಾಶಯಗಳನ್ನು ಹೊಂದಿ ವಿದ್ಯುತ್ ಉತ್ಪಾದನೆಗೆ ನೆರವು ಕೊಟ್ಟು ದೇಶಕ್ಕೆ ಬಹುಪಾಲು ಬೆಳಕು ನೀಡುತ್ತದೆ. ಆದರೆ ಸರ್ಕಾರದ ಈ ಯೋಜನೆಗಳಿಗೆ ಜಲಾಶಯ ನಿರ್ಮಾಣಕ್ಕೆ ಭೂಮಿ ಮತ್ತು ಬದುಕನ್ನು ಕಳೆದುಕೊಂಡ ಜೊಯಿಡಾ ಹಾಗೂ ರಾಮನಗರ ಜನ ಈಗಲೂ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ದೇಶಕ್ಕೆ ಬೆಳಕು ಕೊಟ್ಟ ಜೊಯಿಡಾ ತಾಲೂಕಿನ ಹಲವು ಗ್ರಾಮಗಳು ಈಗಲೂ ಕತ್ತಲೆಯಲ್ಲಿಯೇ ಕಳೆಯುತ್ತಿವೆ. ಹಿಗಿರುವಾಗ ಜೋಯಿಡಾ ತಾಲೂಕಿಗೆ ಮೂಲಭೂತ ಸೌಕರ್ಯ ಒದಗಿಸದೇ ಇಲ್ಲಿಯ ನೈಸರ್ಗಿಕ ಸಂಪತ್ತನ್ನು ಬೇರೆ ಜಿಲ್ಲೆಗಳಿಗೆ ಸಾಗಿಸುವುದು ಈ ಭಾಗದ ಜನರ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದೆ.
ಹೀಗಾಗಿ ನನ್ನ ಕ್ಷೇತ್ರದ ಜನರ ಭಾವನೆಗಳ ವಿರುದ್ಧವಾಗಿ ನಾನಿರಲು ಸಾಧ್ಯವಿಲ್ಲ. ಈ ಭಾಗಕ್ಕೆ ಕಾಳಿ ನದಿಯು ಪ್ರವಾಸೋದ್ಯಮದ ಬೆನ್ನೆಲುಬಾಗಿ ನಿಂತಿದೆ. ಇಲ್ಲಿ ವಿಶ್ವವನ್ನೆ ಆಕರ್ಷಿಸುವಂತಹ ರಾಫ್ಟಿಂಗ್ ಜಲಸಾಹಸ ಕ್ರೀಡೆಗಳು ನಡೆಯುತ್ತವೆ. ಇಲ್ಲಿನ ಹಲವಾರು ಜಲಪಾತಗಳು ಮತ್ತು ಕಣಿವೆಗಳು ಆಕರ್ಷಣಿಯವಾಗಿ ಕಾಣಿಸುತ್ತವೆ. ಬೆಳೆಯುತ್ತಿರುವ ಪ್ರವಾಸೋದ್ಯಮದಿಂದ ಸೃಷ್ಟಿಯಾಗುತ್ತಿರುವ ಉದ್ಯೋಗ ಕಾಳಿ ತಟದ ಯುವಕರಿಗೆ ಪೂರಕ ಶಕ್ತಿಯಾಗಿದೆ. ಹೀಗಿರುವಾ ಕಾಳಿ ನದಿಯ ನೀರನ್ನು ಬೇರೆ ಐದು ಜಿಲ್ಲೆಗಳಿಗೆ ಸಾಗಿಸುವುದು ಸರಿಯಲ್ಲ ಎಂದಿದ್ದಾರೆ.