ಸಿದ್ದಾಪುರ:ಪಟ್ಟಣದ ಬಾಲಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಪದಾಧಿಕಾರಿಗಳ ಸೇವಾ ಸ್ವೀಕಾರ ಹಾಗೂ ಗೌರವ ಸಮರ್ಪಣಾ ಸಮಾರಂಭ ಗುರುವಾರ ನಡೆಯಿತು.
ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಕಾರ್ಯಕ್ರಮ ಉದ್ಘಾಟಿಸಿ ಎಲ್ಲ ಭಾಷೆ ಕುರಿತು ಅಭಿಮಾನ ಇರಬೇಕು. ತಾತ್ಸಾರ ಇರಬಾರದು. ಆದರೆ ವ್ಯಕ್ತಿತ್ವನ್ನು ರೂಪಿಸುವ ಮಾತೃಭಾಷೆಯನ್ನು ಯಾವತ್ತೂ ಮರೆಯಬಾರದು. ಇಂದಿನ ಯುವ ಪೀಳಿಗೆಗೆ ಮಾತೃಭಾಷೆಯ ಕುರಿತು ಆಸಕ್ತಿ ಮೂಡಿಸುವಂತಹ ಕಾರ್ಯಕ್ರಮ ನಡೆಸುವುದರೊಂದಿಗೆ ಕನ್ನಡ ಸಾಹಿತ್ಯದ ಕುರಿತು ತಿಳಿಸಿಕೊಡಬೇಕು ಹಾಗೂ ಪುಸ್ತಕವನ್ನು ಓದುವ ಹವ್ಯಾಸ ಬೆಳೆಸಬೇಕು. ಬೇರೆ ಬೇರೆ ಭಾಷೆಯ ಅನೇಕ ಸಾಹಿತಿಗಳು ಕನ್ನಡಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿಗೆ ಚುನಾವಣೆಯ ಮೂಲಕ ಅಧ್ಯಕ್ಷರನ್ನು ಆಯ್ಕೆ ಮಾಡುವುದಕ್ಕಿಂತ ಅವಿರೋಧವಾಗಿ ಆಯ್ಕೆ ಆಗುವ ಹಾಗೆ ಆಗಬೇಕೆಂದರು.
ತಾಲೂಕು ಕಸಾಪ ನೂತನ ಅಧ್ಯಕ್ಷ ಗೋಪಾಲ ಕೆ. ನಾಯ್ಕ ಭಾಶಿ ಸೇವಾ ಸ್ವೀಕಾರ ಪಡೆದು ಮಾತನಾಡಿ ಹೃದಯದ ಭಾಷೆಯಾಗಿರುವ ಮಾತೃಭಾಷೆಗೆ ಎಂದೂ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು. ಪ್ರತಿ ಮನೆಯಲ್ಲಿ ಹಾಗೂ ಶಾಲೆಯಲ್ಲಿ ಕನ್ನಡದ ಚಟುವಟಿಕೆಗಳನ್ನು ನಡೆಸಲಾಗುವುದು ಎಂದು ಹೇಳಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್.ವಾಸರೆ ಅಧ್ಯಕ್ಷತೆವಹಿಸಿದ್ದರು. ಸಾಹಿತಿ ಸುಬ್ರಾಯ ಮತ್ತೀಹಳ್ಳಿ, ನಿವೃತ್ತ ಮುಖ್ಯ ಶಿಕ್ಷಕ ಜಿ.ಜಿ.ಹೆಗಡೆ ಬಾಳಗೋಡ, ಸಾಹಿತಿ ಹಾಗೂ ಪತ್ರಕರ್ತ ಗಂಗಾಧರ ಕೊಳಗಿ ಉಪಸ್ಥಿತರಿದ್ದರು.
ತಾಲೂಕು ನಿಕಟಪೂರ್ವ ಕಸಾಪ ಅಧ್ಯಕ್ಷ ನಾಗರಾಜ ನಾಯ್ಕ ಮಾಳ್ಕೋಡ ನೂತನ ಅಧ್ಯಕ್ಷ ಗೋಪಾಲ ಕೆ. ನಾಯ್ಕ ಭಾಶಿ ಅವರಿಗೆ ಕನ್ನಡ ಧ್ವಜವನ್ನು ಹಸ್ತಾಂತರಿಸಿದರು.
ಇದೇ ಸಂದರ್ಭದಲ್ಲಿ ಸೇವಾ ನಿವೃತ್ತ ಶಿಕ್ಷಕ ಮಂಜುನಾಥ ಗಣೇಶ ಭಟ್ಟ ಕಲ್ಲೇಮಕ್ಕಿ ಅವರನ್ನು ಗೌರವಿಸಲಾಯಿತು.
ಪಿ.ಬಿ.ಹೊಸೂರು, ಉಷಾ ಪಿ.ನಾಯ್ಕ, ಅಣ್ಣಪ್ಪ ಎನ್.ನಾಯ್ಕ ಶಿರಳಗಿ ಕಾರ್ಯಕ್ರಮ ನಿರ್ವಹಿಸಿದರು.