ಹುಬ್ಬಳ್ಳಿ:ಕಳೆದ ಎರಡು ದಿನಗಳ ಹಿಂದೆ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿಯವರ ಉಪಸ್ಥಿತಿಯಲ್ಲಿ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ನೀಡಲು ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ನೀಡಿದ ಮನವಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಮೊನ್ನೆ ನೀಡಿದ ಮನವಿ ಪತ್ರದಲ್ಲಿ ಎನ್.ಪಿ.ಎಸ್. ಯೋಜನೆಯನ್ನು ರದ್ದುಗೊಳಿಸಿ ಮೊದಲಿನ ಒ.ಪಿ.ಎಸ್. ಯೋಜನೆಯನ್ನು ಮರು ಜಾರಿಗೊಳಿಸಲು ವಿನಂತಿಸಲಾಗಿತ್ತು. ಇದರೊಂದಿಗೆ ಕೇಂದ್ರ ಸರಕಾರಿ ನೌಕರರ ವೇತನಕ್ಕೆ ಸಮನಾದ ವೇತನವನ್ನು ರಾಜ್ಯ ಸರಕಾರಿ ನೌಕರರಿಗೆ ನೀಡಬೇಕು, ಪ್ರೌಢಶಾಲಾ ಸಹ ಶಿಕ್ಷಕರಿಗೆ ಸಕಾಲಕ್ಕೆ ಮುಖ್ಯೋಪಾಧ್ಯಾಯ ಹುದ್ದೆಗೆ ಬಡ್ತಿ ನೀಡಬೇಕು, ಪ್ರೌಢಶಾಲಾ ಶಿಕ್ಷಕರಿಗೆ ೧೦, ೧೫, ೨೦ ಮತ್ತು ೨೫ ವರ್ಷಗಳ ಕಾಲಮಿತಿ ಬಡ್ತಿಯನ್ನು ಅಖಂಡ ಸೇವೆ ಪರಿಗಣಿಸಿ ನೀಡಬೇಕು ಹಾಗೂ ಮತ್ತಿತರ ಸೌಲಭ್ಯಗಳಿಗೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಗಿತ್ತು.
ಸರಕಾರದ ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರೂ ಸಹ ಧಾರವಾಡದಲ್ಲಿ ನಡೆದ ನಮ್ಮ ಸಂಘದ ಹೋರಾಟವನ್ನು ಮುಕ್ತಾಯಗೊಳಿಸುವಾಗ ನಮ್ಮ ನ್ಯಾಯಯುತವಾದ ಬೇಡಿಕೆಗಳಿಗೆ ಶೀಘ್ರ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದನ್ನೂ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿತ್ತು.
ಈ ಎಲ್ಲ ಸಂಗತಿಗಳ ಹಿನ್ನೆಲೆಯಲ್ಲಿ ಮನವಿಯನ್ನು ಸ್ವೀಕರಿಸಿದ ಮುಖ್ಯಮಂತ್ರಿಗಳು ಇನ್ನೊಂದು ವಾರದಲ್ಲಿ ಈ ಸಮಸ್ಯೆಗಳ ಪರಿಹಾರಕ್ಕೆ ಸಭೆ ಕರೆಯುವುದಾಗಿ ತಿಳಿಸಿದ್ದಾರೆ. ಈ ಸಭೆಯಲ್ಲಿ ಶಿಕ್ಷಣ ಸಚಿವರು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಆರ್ಥಿಕ ಇಲಾಖೆಯ ಸಚಿವರು ಪಾಲ್ಗೊಳ್ಳಲಿದ್ದಾರೆ. ಈ ಭರವಸೆಯನ್ನು ಗಮನಿಸಿದಾಗ ನಮ್ಮ ಸಂಘದ ಅನೇಕ ಬೇಡಿಕೆಗಳಿಗೆ ಶೀಘ್ರವೆ ಪರಿಹಾರ ದೊರಕಲಿದೆ ಎಂಬ ಆಶಾಭಾವನೆ ಮೂಡಿದೆ ಎಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಆರ್. ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.