ಯಲ್ಲಾಪುರ:ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ರಾಜ್ಯ ಹಾಗೂ ಕೇಂದ್ರ ಸರ್ಕಾರದವರೆಗೂ ಬಿಜೆಪಿ ಆಡಳಿತದಲ್ಲಿದೆ. 5 ಇಂಜಿನ್ ಸರ್ಕಾರ ಇದ್ದರೂ ಅವರಿಂದ ಹಳ್ಳಿಗಳಿಗೆ ರಸ್ತೆ ಸೌಕರ್ಯ ನೀಡಲು ಸಾಧ್ಯವಾಗದೇ ಇರುವುದು ನಾಚಿಕೆಗೇಡು ಎಂದು ಕಾಂಗ್ರೆಸ್ ನ ಯುವ ಮುಖಂಡ ಪ್ರಶಾಂತ ದೇಶಪಾಂಡೆ ಟೀಕಿಸಿದರು.
ಅವರು ತಾಲೂಕಿನ ಬಳಗಾರಿನಲ್ಲಿ ರಸ್ತೆ ದುರಸ್ತಿಗೆ ಆಗ್ರಹಿಸಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯ ನೇತೃತ್ವ ವಹಿಸಿ ಮಾತನಾಡಿದರು. ರಸ್ತೆ ಯಾವ ಪಕ್ಷ, ಜಾತಿವರಿಗೆ ಸೇರಿದ್ದಲ್ಲ. ಎಲ್ಲರೂ ಓಡಾಡುವ ರಸ್ತೆ ದುರಸ್ತಿಯ ವಿಷಯದಲ್ಲೂ ರಾಜಕೀಯ ಮಾಡುವುದು ಸರಿಯಲ್ಲ. ಬಿಜೆಪಿಯಲ್ಲಿ ಕಾರ್ಯಕರ್ತರಿಗಿಂತ ಗುತ್ತಿಗೆದಾರರೇ ಹೆಚ್ಚಾಗಿದ್ದಾರೆ. ಆದರೂ ರಸ್ತೆಗೆ ಅನುದಾನ ತರಲು ಹೇಗೆ ಸಾಧ್ಯವಾಗುವುದಿಲ್ಲ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ಪ್ರತಿಭಟನೆ ಮಾಡುವ ನಿರ್ಧಾರ ಮಾಡಿರುವುದು ತಿಳಿಯುತ್ತಿದ್ದಂತೆ ದೇಹಳ್ಳಿ ಭಾಗದಲ್ಲಿ ಕೆಲವೆಡೆ ರಸ್ತೆ ದುರಸ್ತಿಗೆ ಭೂಮಿಪೂಜೆ ನೆರವೇರಿಸಲಾಗಿದೆ. ಎಲ್ಲಿ ಸಚಿವರ ಆತ್ಮೀಯರಿದ್ದಾರೋ ಆ ಭಾಗಕ್ಕೆ ಮಾತ್ರ ರಸ್ತೆ ಮಾಡಲಾಗುತ್ತಿದೆ, ಎಲ್ಲಿ ಆತ್ಮೀಯರಿಲ್ಲವೋ ಅಲ್ಲಿ ರಸ್ತೆ ಆಗುತ್ತಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಈ ರೀತಿಯ ರಾಜಕಾರಣ ಮಾಡುವುದು ಸರಿಯಲ್ಲ ಎಂದರು. ನಾವು ರಾಜಕಾರಣಕ್ಕಾಗಿ ಪ್ರತಿಭಟನೆ ನಡೆಸುತ್ತಿಲ್ಲ. ಸಚಿವರು ಗ್ರಾಮೀಣ ಭಾಗಕ್ಕೆ ಮೂಲ ಸೌಕರ್ಯಗಳನ್ನಹ ಕಲ್ಪಿಸುವತ್ತ ಗಮನ ಹರಿಸಲಿ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್.ಭಟ್ಟ ಮಾತನಾಡಿ, ತಾಲೂಕಿನಲ್ಲಿ ಆಡಳಿತ ಪಕ್ಷ ಬಿಜೆಪಿಯವರ ಭ್ರಷ್ಟಾಚಾರ ಮಿತಿಮೀರಿದೆ. ಅಧಿಕಾರಿಗಳೂ ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಇದು ಮುಂದುವರಿದರೆ ಸರ್ಕಾರಿ ಕಚೇರಿಗಳ ಎದುರು ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿದರು.
ಕಾಂಗ್ರೆಸ್ ಮುಖಂಡರಾದ ಉಲ್ಲಾಸ ಶಾನಭಾಗ, ಎನ್.ಕೆ.ಭಟ್ಟ ಮೆಣಸುಪಾಲ, ಟಿ.ಸಿ.ಗಾಂವ್ಕಾರ, ಎನ್.ಎನ್.ಹೆಬ್ಬಾರ್, ದಿಲೀಪ ರೊಖಡೆ, ಅನಿಲ್ ಮರಾಠೆ, ಭಾಸ್ಕರ ಭಟ್ಟ ಅಡಿಕೆಪಾಲ, ನಾರಾಯಣ ಭಟ್ಟ ಕಲ್ಮನೆ, ಗಣಪತಿ ಪಟಗಾರ, ಕೃಷ್ಣ ಕೇಶನ್, ಅನಿಲ ನಾಯ್ಕ, ವೆಂಕಟ್ರಮಣ ಭಾಗ್ವತ ಇತರರಿದ್ದರು.