Slide
Slide
Slide
previous arrow
next arrow

ವೃಕ್ಷಲಕ್ಷ ಆಂದೋಳನ;ರಾಜ್ಯದಲ್ಲಿ ಗೋಮಾಳ ಭೂಮಿಯನ್ನು ಏಕೆ ಉಳಿಸಿಕೊಳ್ಳಬೇಕು?-ವೈಜ್ಲಾನಿಕ ವಿಶ್ಲೇಷಣೆ

300x250 AD

ರಾಜ್ಯದಲ್ಲಿರುವ ಸಾಮೂಹಿಕ ಭೂಮಿ: ರಾಜ್ಯದಲ್ಲಿ ಹಳ್ಳಿಗರ ಮೇವು ಮತ್ತು ಕೄಷಿಗೆ ಪೂರಕವಾದ ಬೇಡಿಕೆಗಳನ್ನು ಪೂರೈಸಲೆಂದು ಮೀಸಲಿರಿಸಿದ ಸುಮಾರು 17.5ಲಕ್ಷ ಹೆ.ಗೋಮಾಳ ಭೂಮಿಯಿದೆ. ಇದನ್ನು ಗೋಮಾಳ, ಗಾಯರಾಣ, ಹುಲ್ಲುಬನ್ನಿ, ಗೋಚರ, ಜಾನುವಾರು ಮುಪ್ಫತ್ತು, ಜಾಡಿ, ಕಾವಲ್, ಅಮೃತಮಹಲ್ ಕಾವಲ್, ಕುಮ್ಕಿ, ಬೆಟ್ಟ, ಸೊಪ್ಪಿನಬೆಟ್ಟ ಇತ್ಯಾದಿ ಹೆಸರುಗಳಿಂದ ಸರ್ಕಾರಿ ದಾಖಲೆಗಳಲ್ಲಿ ಗುರುತಿಸಲಾಗುತ್ತದೆ. ಇದೂ ಸೇರಿದಂತೆ, ರಾಜ್ಯದಲ್ಲಿ ಒಟ್ಟೂ 25ಲಕ್ಷ ಹೆ. ಸರ್ಕಾರಿ ಕಂದಾಯ ಜಮೀನಿದೆ. ಇದು ಅತ್ಯಂತ ಮಹತ್ವದ ಸಾಮೂಹಿಕ ಭೂಮಿಯಾಗಿದೆ.

ಸಾಮೂಹಿಕ ಭೂಮಿಯ ಮಹತ್ವ: ಹಳ್ಳಿಗರಿಗೆಲ್ಲರೂ ಸಮಾನವಾಗಿ ಬಳಸುವ ಪ್ರದೇಶವಿದು. ಇಲ್ಲಿ ಕೆರೆ-ಹಳ್ಳಗಳಂಥ ಜಲಮೂಲಗಳು, ಹುಲ್ಲು ನೀಡುವ ಗೋಮಾಳ, ಕುರುಚಲು ಕಾಡು ಎಲ್ಲವೂ ಇವೆ. ದಿನಂಪ್ರತಿ ಬೇಕಾಗುವ ಮೇವಿನ ಹುಲ್ಲು, ಬೇಸಾಯಕ್ಕಾಗಿ ಸೊಪ್ಪು-ತರಗಲೆ, ಉರುವಲು, ಜೇನು, ಹಣ್ಣು-ಹಂಪಲುಗಳೆಲ್ಲ ಹಳ್ಳಿಗರಿಗೆ ದೊರಕುವದು ಈ ಪ್ರದೇಶದಿಂದ. ಕಾಡಿನ ಮೇಲೆ ಹಳ್ಳಿ-ಪಟ್ಟಣಗಳ ಜನಜೀವನದ ಒತ್ತಡವನ್ನು ಕಡಿಮೆಮಾಡುವದರ ಜೊತೆಗೆ, ಕಾಡುಪ್ರಾಣಿಗಳು ಊರಿಗೆ ಬರದಂತೆ ತಡೆಯುವ ರಕ್ಷಣಾಪೊರೆಯಾಗಿಯೂ ಈ ಪ್ರದೇಶಗಳು ಕಾರ್ಯನಿರ್ವಹಿಸುತ್ತವೆ. ನೆರೆ-ಬರಗಳು ಬಂದಾಗ ಆಗುವ ಆಘಾತದ ತೀವೃತೆ ತಗ್ಗಿಸುತ್ತವೆ. ಹೀಗಾಗಿ, ಇದೊಂದು ಅಮೂಲ್ಯವಾದ ಸಮುದಾಯ ಸಂಪತ್ತು (Common Pool Resources-CPR) ಎಂದು ಪರಿಸರ-ಅರ್ಥಶಾಸ್ತ್ರಜ್ಲರು ಗುರುತಿಸುತ್ತಾರೆ.

ಈ ಸರ್ಕಾರಿ ಕಂದಾಯಭೂಮಿ ಪ್ರದೇಶಗಳನ್ನು ನಿರ್ವಹಿಸಬೇಕಾದ ಬಗೆ: ಈ ಸರ್ಕಾರಿ ಭೂಮಿ ಇರುವದು ಮುಖ್ಯವಾಗಿ, ಹಳ್ಳಿಗಳ ಕೃಷಿ, ಹೈನುಗಾರಿಕೆ ಮತ್ತು ಜನಜೀವನವನ್ನು ಪೋಷಿಸಲು. ಅಗತ್ಯವಿದ್ದಾಗ ಸಾಮೂಹಿಕಹಿತದ ರಸ್ತೆ, ಶಾಲೆ, ಆಸ್ಪತ್ರೆ ಇತ್ಯಾದಿ ಸಾರ್ವಜನಿಕ ಉಪಯೋಗಗಳಿಗೆ ಈ ಸರ್ಕಾರಿ ಕಂದಾಯಭೂಮಿಯ ಕೃಷಿಗೆ ಯೋಗ್ಯವಲ್ಲದ ಭಾಗಗಳಾದ “ಸಿ” ಮತ್ತಿ “ಡಿ” ಪ್ರದೇಶಗಳನ್ನು ಬಳಸಬೇಕಾದ್ದು ನ್ಯಾಯಯುತವೇ ಅಗಿದೆ. ನೈಜ ವಸತಿಹೀನರಿಗೆ ಮನೆಕಟ್ಟಲು ಅಥವಾ ಭೂರಹಿತರಿಗೆ ಉಳುಮೆಮಾಡಿ ಬದುಕು ಕಟ್ಟಿಕೊಳ್ಳಲು ಸಹ ಈ ಸಾಮೂಹಿಕಭೂಮಿಯನ್ನು ಬಳಸಿಕೊಳ್ಳಬೇಕಾಗುತ್ತದೆ. ಕೆರೆ ಅಚ್ಚುಕಟ್ಟು ಅಭಿವೃದ್ಧಿ, ನೀರಾವರಿ ಇತ್ಯಾದಿ ಸಾರ್ವಜನಿಕ ಉದ್ದೆಶಗಳಿಗೂ ಬಳಸಬೇಕಾಗುತ್ತದೆ. ಈ ಬಗೆಯ ಸ್ಥಳೀಯ ಅಗತ್ಯಗಳನ್ನೆಲ್ಲ ವಾಸ್ತವ ನೆಲೆಗಟ್ಟಿನಲ್ಲಿ ಚಿಂತಿಸಿ, ನ್ಯಾಯಯುತವಾಗಿ ಭೂಮಂಜೂರಿ ಮಾಡುವ ವಿವೇಚನಾ ಅಧಿಕಾರವನ್ನು ಭೂಕಂದಾಯ ಕಾಯ್ದೆ ಅನ್ವಯ ಸರ್ಕಾರ ಮಾಡಬೇಕಿದೆ.

ಇತ್ತೀಚಿನ ದಶಕಗಳಲ್ಲಾದ ಗೋಮಾಳ ಭೂಮಿಯ ಅಪಾರ ನಾಶ: ಆದರೆ, ಈ ಸಮೃದ್ಧ ಸಾಮೂಹಿಕಭೂಮಿಯು ಇತ್ತೀಚಿನ ದಶಕಗಳಲ್ಲಿ ವೇಗವಾಗಿ ಮತ್ತು ಗಂಭೀರ ಪ್ರಮಾಣದಲ್ಲಿ ನಾಶವಾಗುತ್ತಿದೆ. ಇದರಲ್ಲಿ, ಸರ್ಕಾರದ ಅಂಕಿ-ಅಂಶದ ಪ್ರಕಾರ ಸುಮಾರು ಒಂದೂಮುಕ್ಕಾಲು ಲಕ್ಷ ಹೆ. ಕಂದಾಯಭೂಮಿ ಒತ್ತುವರಿಯಾಗಿದೆ. ಹದಿನಾರು ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ನ್ಯಾಯಾಲಯಗಳಲ್ಲಿ ಬಾಕಿಯಿವೆ. ವೇಗದ ನಗರೀಕರಣ, ವೇಗದ ಭೂಒತ್ತುವರಿ, ಉದ್ಯಮಗಳಿಗೆ ಗುತ್ತಿಗೆ ಆಧಾರದಲ್ಲಿ ಈ ಪ್ರದೇಶವನ್ನು ನೀಡಿರುವದು, ಏಕಪ್ರಭೇಧ ನೆಡುತೋಪುಗಳ ನಿರ್ಮಾಣ, ಗಣಿಗಾರಿಕೆ ಇತ್ಯಾದಿ ಅಂಶಗಳೆಲ್ಲ ಇದಕ್ಕೆ ಕಾರಣವಾಗಿವೆ.

ಇದರ ದುಷ್ಪರಿಣಾಮಗಳನ್ನು ಹಲವಾರು ವೈಜ್ಲಾನಿಕ ಅಧ್ಯಯನಗಳು ನಿರೂಪಿಸಿವೆ. ಸರ್ಕಾರವೆ ರಚಿಸಿದ್ದ ಏ.ಟಿ.ರಾಮಸ್ವಾಮಿ ಸದನ ಸಮಿತಿ ಮತ್ತು ಬಾಲಸುಬ್ರಮಣ್ಯ ತಜ್ಲಸಮಿತಿಗಳು ಇದರ ಅಪಾಯವನ್ನು ಗುರುತಿಸಿವೆ. ಗೋಮಾಳಗಳನ್ನು ಅನ್ಯ ಉದ್ದೇಶಗಳಿಗೆ ಬಳಸದಂತೆ ಹೈಕೋರ್ಟ್ ಸಹ ಹಲವು ಪ್ರಕರಣಗಳಲ್ಲಿ ಆದೇಶಿಸಿದೆ.

ಪರಿಣಾಮಗಳೇನು? ರಾಜ್ಯಾದ್ಯಾಂತ ಗೋಮಾಳ ಸಾಮೂಹಿಕ ಭೂಮಿ ಕುಗ್ಗತೊಡಗಿರುವದರಿಂದ, ಹೊಳೆ-ಕೆರೆ, ನದಿ ಪ್ರದೇಶಗಳ ಕಣಿವೆಗಳಲ್ಲಿ ಹಸಿರುಕವಚ ಮಾಯವಾಗಿ ಅಂತರ್ಜಲ ಕುಸಿಯುತ್ತಿದೆ. ಮೇವು ಕೊರಯಿಂದಾಗಿ ಜನರು ಹೈನುಗಾರಿಕೆಯಿಂದ ವಿಮುಖರಾಗುತ್ತಿದ್ದಾರೆ. ಮೇಯಲು ಗೋಮಾಳವಿಲ್ಲದೆ ಮಲೆನಾಡು-ಗಿಡ್ಡದಂತ ಅಪ್ಪಟ ದೇಸಿ ಆಕಳು ತಳಿಯ ಸಂತತಿಯು ವಿನಾಶದಂಚಿಗೆ ತಲುಪಿದೆ. ಸಾವಯವ ಕೃಷಿಗೆ ಬೇಕಾದ ಹಸಿರುಸೊಪ್ಪು, ತರಗೆಲೆ ಇತ್ಯಾದಿ ಒಳಸುರಿಗಳು ದೊರಕದೆ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಜೇನುಸಂತತಿ ಕುಸಿಯುತ್ತಿದ್ದು, ಕಾಡಿನ ಜೇನಿನ ಇಳುವರಿ ಕಡಿಮೆಯಾಗುತ್ತಿರುವದಲ್ಲದೆ, ಕೃಷಿ ಇಳುವರಿಯೂ ಕುಸಿಯುತ್ತಿದೆ. ಬೇಸಿಗೆಯಲ್ಲಿ ಹಳ್ಳಿಗಳ ಸುತ್ತಲು ಬೆಂಕಿ ಪ್ರಕರಣಗಳು ಹೆಚ್ಚಾಗುತ್ತಿವೆ. ಒಟ್ಟಿನಲ್ಲಿ ಗ್ರಾಮೀಣ ಬದುಕಿನ ರಕ್ಷಣಾಪೊರೆಯಂತಿದ್ದ ಈ ಸಮುದಾಯಭೂಮಿ ನಾಶದಿಂದಾಗಿ, ಗ್ರಾಮೀಣ ಬದುಕು ಕುಸಿಯುತ್ತಿದೆ.

ಸರ್ಕಾರ ಏನು ಮಾಡಬೇಕಿದೆ? ಗ್ರಾಮೀಣರ ಬದುಕು ಕಾಯುವ ಮೂಲಸೆಲೆಗಳಲ್ಲೊಂದಾದ “ಹಸಿರು ಪುಪ್ಪಸ”ದಂತಿರುವ ಈ ಗೋಮಾಳ ಬೆಟ್ಟ ಭೂಮಿಯನ್ನು ಸರ್ಕಾರವು ರಕ್ಷಿಸಲೇಬೇಕಿದೆ. ಈ ನಿಟ್ಟಿನಲ್ಲಿ ಈ ಕೆಳಗಿನ ಅಂಶಗಳನ್ನು ಸರ್ಕಾರವು ತನ್ನ ನೀತಿಯಲ್ಲಿ ಅಳವಡಿಸಿಕೊಳ್ಳಬೇಕಿದೆ.

300x250 AD

1.ಈ ಸಮೂದಾಯ ಪ್ರದೇಶಗಳನ್ನು ಸಾರ್ವಜನಿಕ ವಲಯದಲ್ಲೇ ಇರಿಸಿಕೊಳ್ಳಬೇಕು. ಇವನ್ನು ಉದ್ಯಮಗಳಿಗೆ, ಖಾಸಗಿ ಸಂಘಸಂಸ್ಥೆಗಳಿಗೆ ಪರಭಾರೆ ಮಾಡಬಾರದು.

2.ಈಗಾಗಲೇ ಅತಿಕ್ರಮಣವಾಗಿರುವ ಅಥವಾ ಪರಬಾರೆಯಾಗಿರುವ ಗೋಮಾಳಭೂಮಿಯನ್ನು ಪುನಃ ಹಸಿರೀಕರಣ ಮಾಡಲು ಸೂಕ್ತ ಕಾರ್ಯಕ್ರಮ ರೂಪಿಸಬೇಕು.

3.ಸರ್ಕಾರವು ಎಲ್ಲೆಡೆ ಗೋಶಾಲೆಗಳನ್ನು ಸ್ಥಾಪಿಸಿರುವದು ಸ್ವಾಗತಾರ್ಹ. ಇದಕ್ಕೆ ಪೂರಕವಾಗಿ ಆ ಪ್ರದೇಶಗಳಲ್ಲಿ ಗೋಮಾಳವನ್ನು ಗುರುತಿಸಿ ರಕ್ಷಿಸುವ ಯೋಜನೆಯನ್ನು ಪಶುಸಂಗೋಪನೆ ಇಲಾಖೆ ಮಾಡಬೇಕು.

4.ಪ್ರತಿ ಊರಿನಲ್ಲೂ ಇರುವ ಗೋಮಾಳ ಸೊಪ್ಪಿನ ಬೆಟ್ಟ ಪ್ರದೇಶಗಳನ್ನು ಗುರುತಿಸಿ, ಅದನ್ನು ರಕ್ಷಿಸುವ ಯೋಜನೆಗಳನ್ನು ಕಂದಾಯ ಹಾಗೂ ಅರಣ್ಯ ಇಲಾಖೆಗಳು ಜಂಟಿಯಾಗಿ ಕೈಗೊಳ್ಳಬೇಕು.

5.ರಾಜ್ಯದ ಎಲ್ಲೆಡೆ ಗ್ರಾಮ ಪಂಚಾಯತಗಳಲ್ಲಿ “ಜೀವವೈವಿಧ್ಯ ಕಾನೂನು” ಅನ್ವಯ ಈಗಾಗಲೇ ಜೀವವೈವಿಧ್ಯ ನಿರ್ವಹಣಾ ಸಮಿತಿಗಳನ್ನು ಸ್ಥಾಪಿಸಲಾಗಿದೆ. ಸಾಮೂಹಿಕ ಭೂಮಿಯನ್ನು ಗುರುತಿಸಿ, ಸಂರಕ್ಷಿಸುವ ಸೂಕ್ತ ನೀತಿ ಹಾಗೂ ಕಾರ್ಯಕ್ರಮಗಳನ್ನು “ಜೀವವೈವಿಧ್ಯ ನಿರ್ವಹಣಾ ಸಮಿತಿಗಳು” ಜನಸಹಭಾಗಿತ್ವದಲ್ಲಿ ರೂಪಿಸಬೇಕು.

-ವೃಕ್ಷಲಕ್ಷ ಆಂದೋಳನ- ಕರ್ನಾಟಕ , ಶಿರಸಿ (ಉತ್ತರ ಕನ್ನಡ)

Share This
300x250 AD
300x250 AD
300x250 AD
Back to top