ಮುಂಡಗೋಡ:ಪೊಲೀಸ್ ಸಿಬ್ಬಂದಿಗಳ ವಸತಿ ಗೃಹಗಳ ಕೊರತೆ ಹಾಗೂ ಶಿಥಿಲಾವಸ್ಥೆಯಲ್ಲಿರುವ ಬಗ್ಗೆ ಸಿಬ್ಬಂದಿಗಳು ನಮ್ಮ ಗಮನಕ್ಕೆ ತಂದಿದ್ದಾರೆ. ವಸತಿ ಗೃಹಗಳು ಕೊರತೆ ಜಿಲ್ಲೆಯ ಕೆಲವಡೆ ಇದ್ದು ಹಂತ ಹಂತವಾಗಿ ನಿರ್ಮಾಣ ಕಾರ್ಯ ನಡೆಯುತ್ತಿದೆ. ಎಂದು ಜಿಲ್ಲಾ ವರಿಷ್ಠಾಧಿಕಾರಿ ಡಾ.ಸುಮನ್ ಪನ್ನೇಕರ್ ಹೇಳಿದರು.
ಅವರು ಸೋಮವಾರ ಪಟ್ಟಣದ ಪೊಲೀಸ್ ಠಾಣೆಗೆ ಪ್ರಥಮ ಬಾರಿಗೆ ಭೇಟಿ ನೀಡಿ ಪತ್ರಕರ್ತರೊಂದಿಗೆ ಮಾತನಾಡಿದರು.
ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುವ ಹಲವು ಪೊಲೀಸ್ ಸಿಬ್ಬಂದಿಗಳಿಗೆ ವಸತಿ ಗೃಹವಿಲ್ಲದೆ ಸುಮಾರು ವರ್ಷಗಳಿಂದ ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದಾರೆ. ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಸರಕಾದಿಂದ 2020ರಿಂದ 2025ರ ವರೆಗೆ ಪೊಲೀಸ್ ವಸತಿ ಗೃಹಗಳ ನಿರ್ಮಾಣಕ್ಕೆ ಹಂತ ಹಂತವಾಗಿ ಅನುದಾನ ಬರಲಿದ್ದು, ಇಗಾಗಲೆ ಜಿಲ್ಲೆಯ 2-3 ತಾಲೂಕುಗಳಲ್ಲಿ ವಸತಿ ಗೃಹಗಳ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಈ ತಾಲೂಕು ಸೇರಿದಂತೆ ನೂತನ ವಸತಿ ಗೃಹಗಳ ನಿರ್ಮಾಣ ನಡೆಯಲಿದೆ. ವಸತಿ ಗೃಹದ ದುರಸ್ತಿಯ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಲಾಗಿದೆ. ಅದರ ಮಾಹಿತಿಯನ್ನು ಪಡೆದುಕೊಂಡಿದ್ದೆವೆ.ಇಲಾಖೆಯಲ್ಲಿ ಖಾಲಿ ಇರುವ ಸಿಬ್ಬಂದಿಗಳ ಹುದ್ದೆ ಭರ್ತಿಯೂ ಹಂತ ಹಂತವಾಗಿ ನಡೆಯುತ್ತಿದೆ ಎಂದರು.
ಮಳಗಿಯಲ್ಲಿರುವ ಠಾಣೆಯನ್ನು ಮೇಲ್ದರ್ಜೆಗೆ ಏರಿಸುವ ಪ್ರಸ್ತಾವನೆ ಬಂದಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಕ್ರೈಮ್ ಆಧಾರದ ಮೇಲೆ ಪ್ರಸ್ತಾವನೆ ಮಾನ್ಯತೆ ಆಗುತ್ತದೆ. ಪಿಎಸ್‍ಐ ಅವರ ವಾಹನ ಹಳೆಯದಾಗಿದ್ದು ತಾಲೂಕು ಬಹಳ ವಿಸ್ತಾರವಾದ ಕಾರಣ ಮತ್ತು ಸಚಿವರು ಬಂದ ವೇಳೆ ಓಡಾಡಲು ಸಮಸ್ಯೆ ಆಗುವ ಬಗ್ಗೆ ಎಸ್‍ಪಿ ಅವರ ಗಮನಕ್ಕೆ ತಂದಾಗ ಮುಂದಿನ ದಿನದಲ್ಲಿ ಬೇರೆಯ ವಾಹನದ ವ್ಯವಸ್ಥೆ ಮಾಡಲಾಗುವುದು ಎಂದರು.
ಈ ವೇಳೆ ಸಿಪಿಐ ಎಸ್.ಎಸ್.ಸಿಮಾನಿ, ಪಿಎಸ್‍ಐ ಬಸವರಾಜ ಮಬನೂರ ಉಪಸ್ಥಿತರಿದ್ದರು.