ಶಿರಸಿ: ಇಲ್ಲಿನ ಪ್ರೇರಣಾ ಮಹಿಳಾ ಮತ್ತು ಮಕ್ಕಳ ಕ್ಷೇಮಾಭಿವೃದ್ಧಿ ಸಂಸ್ಥೆ(ರಿ) ಇವರು ಮಾ.5 ರ ಶನಿವಾರ ಮಹಿಳಾ ದಿನಾಚರಣೆಯ ನಿಮಿತ್ತ ಕುಳವೆ ಶಾಲೆಯಲ್ಲಿ ರಂಗೋಲಿ ಸ್ಪರ್ಧೆ ಹಾಗೂ ಅಡಿಗೆಮನೆಯ ಹಸಿಕಸ ಮತ್ತು ಕೃಷಿ ತ್ಯಾಜ್ಯ(ಅಡಿಕೆ ಸಿಪ್ಪೆ)ಗಳಿಂದ ಗೊಬ್ಬರ ತಯಾರಿಸುವ ಕುರಿತು ಮಾಹಿತಿ ಶಿಬಿರವನ್ನು ಆಯೋಜಿಸಿದ್ದರು.
ಪ್ರಾರಂಭದಲ್ಲಿ ಕುಳವೆ ಗ್ರಾಮಪಂಚಾಯತ ಅಧ್ಯಕ್ಷರಾದ ವಿನಯ ಭಟ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಕೋರಿದರು. ನಂತರ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಕೃಷಿ ವಿಜ್ಞಾನಿ ಡಾ|| ಶಿವಶಂಕರ ಮೂರ್ತಿಯವರು ಅಡಿಗೆಮನೆ ಹಸಿಕಸ ಮತ್ತು ಅಡಿಕೆ ಸಿಪ್ಪೆ ಮೊದಲಾದ ಕೃಷಿ ತ್ಯಾಜ್ಯಗಳಿಂದ ಗೊಬ್ಬರ ತಯಾರಿಸುವ ವಿಧಾನವನ್ನು ವಿವರಿಸಿದರು. ಕೃಷಿಯಲ್ಲಿ ಹೆಚ್ಚು ಆದಾಯಗಳಿಸುವ ಮಾರ್ಗಗಳನ್ನು ತಿಳಿಸಿ ಮಹಿಳೆಯರು ಸ್ವಾವಲಂಬಿಗಳಾಗಿ ಬಾಳಲು ವಿವಿಧ ಗೃಹ ಉದ್ಯೋಗಗಳ ಬಗ್ಗೆ ಉದಾಹರಣೆಗಳೊಂದಿಗೆ ಮಾಹಿತಿ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಚಾರುಚಂದ್ರ ಶಾಸ್ತ್ರಿಯವರು ತಮ್ಮಲ್ಲಿಯ ಮಹಿಳಾ ಸಂಘಟನೆಗಳ ಕಾರ್ಯಚಟುವಟಿಕೆಯ ಬಗ್ಗೆ ಸಂತಸ ವ್ಯಕ್ತಪಡಿಸಿ ಇಂತಹ ಶಿಬಿರಗಳು ಹೆಚ್ಚು ಹೆಚ್ಚು ನಡೆಯಬೇಕೆಂದರು.
ರೇಖಾ ಹೆಗಡೆ ಹಾಗೂ ಸಂಗಡಿಗರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಪೂರ್ಣಿಮಾ ವಾಲಗಳ್ಳಿ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರೆ ಪ್ರೇರಣಾ ಅಧ್ಯಕ್ಷೆ ಪ್ರಭಾ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗ್ರಾಮಪಂಚಾಯತ ಸದಸ್ಯರಾದ ರಂಜಿತಾ ಹೆಗಡೆಯವರು ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು. ಸ್ಪರ್ಧೆಗೆ ನಿರ್ಣಾಯಕರಾಗಿ ಶಿಕ್ಷಕಿಯರಾದ ಲಲಿತಾ ಹೆಗಡೆ ಹಾಗೂ ರಮಾ ಸಿ ಹೆಗಡೆ ಸಹಕರಿಸಿದರು. ಸ್ಥಳೀಯ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಾಹಿತಿ ಪಡೆದುಕೊಂಡರು.
ರಂಗವಲ್ಲಿ ಸ್ಪರ್ಧೆಯಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳನ್ನು ಪಡೆದ ಶಶಿಕಲಾ ಪಿ ನಾಯ್ಕ, ದೀಪಾ ವಿ ನಾಯ್ಕ ಹಾಗೂ ಗೀತಾ ಎಂ ಹೆಗಡೆಯವರನ್ನು ಬಹುಮಾನ ನೀಡಿ ಗೌರವಿಸಲಾಯಿತು.