ಶಿರಸಿ: ಕರ್ನಾಟಕದ ಸುಪ್ರಸಿದ್ದ ಮಂಜುಗುಣಿಯ ವೆಂಕಟರಮಣ ದೇವರ ನೌಕಾ ವಿಹಾರೋತ್ಸವ, ಅಶ್ವ ರಥೋತ್ಸವ, ಭಕ್ತರಿಂದ ಸಾಮೂಹಿಕ ಸತ್ಯನಾರಾಯಣ ವೃತ,ಪೂಜೆ ಹಾಗೂ ಈ ವರ್ಷ ವಿಶೇಷವಾಗಿ ಜಯ-ವಿಜಯರ ಪಂಚ ಲೋಹದ ಮೂರ್ತಿ ಅನಾವರಣ ಕಾರ್ಯಕ್ರಮ ಮಾ.13ರ ರವಿವಾರ ದಂದು ನಡೆಯಲಿದೆ.
ಮಾ.13ರ ಬೆಳಿಗ್ಗೆ 9:30ಕ್ಕೆ ವೆಂಕಟೇಶ ದೇವರಲ್ಲಿ ಪೂಜೆ, 10 ಗಂಟೆಗೆ ಭಕ್ತರಿಂದ ಸಾಮೂಹಿಕ ಸತ್ಯನಾರಾಯಣ ವೃತ ಕಥಾ ಪೂಜೆ ಆರಂಭವಾಗಲಿದ್ದು, ಇದೇ ವೇಳೆ ದೇವಸ್ಥಾನದ ದ್ವಾರ ನಿಯಮಕ್ಕೆ ಹೊಂದುವಂತೆ ಪಂಚಲೋಹದಿಂದ ನಿರ್ಮಿಸಿದ ಜಯ ವಿಜಯರ ಮೂರ್ತಿ ಅನಾವರಣಗೊಳ್ಳಲಿದೆ. ಸಂಜೆ 5 ಗಂಟೆಗೆ ಸಾಮೂಹಿಕ ಪ್ರಾರ್ಥನೆಯೊಂದಿಗೆ ಕ್ಷೇತ್ರದ ಪವಿತ್ರ ಚಕ್ರತೀರ್ಥ ಕೆರೆಯಲ್ಲಿ ಸಾಲಂಕೃತಗೊಂಡ ದೋಣಿಯಲ್ಲಿ ತಿರುಮಲಯೋಗಿಗಳಿಂದ ಪೂಜಿಸಲ್ಪಟ್ಟ ವೆಂಕಟರಮಣ ದೇವರ ನೌಕಾ ವಿಹಾರೋತ್ಸವ ನಡೆಯಲಿದೆ. ಕೆರೆಯ ದಡದಲ್ಲಿ ರಜತಮಯ ಅಶ್ವ ರಥದಲ್ಲಿ ಭೂ ರಮಣನಾದ ಶ್ರೀನಿವಾಸ ದೇವರ ತೀರ್ಥ, ತೀರ, ವಿಹಾರ ಉತ್ಸವಗಳು ನೆರವೇರಲಿವೆ.
ಉತ್ಸವ ಮೂರ್ತಿಗಳ ವೈಭವ ಮಹೋತ್ಸವ ದೀಪಾಲಕೃಂತ ಕೆರೆಯಲ್ಲಿ ತೀರ್ಥಾರತಿಯೊಂದಿಗೆ ಸಂಪನ್ನಗೊಳ್ಳಲಿದೆ. ಸ್ಥಾನದ ಎದುರಿನ ಕಲ್ಯಾಣ ವೇದಿಕೆಯಲ್ಲಿ ಮೂರ್ತಿಗಳೊಂದಿಗೆ ರಾಜ ಭೋಗಾರ್ಪಣೆ, ಪಟ್ಟಗಾಣಿಕೆ ಸಮರ್ಪಣೆ, ತೀರ್ಥ ಪ್ರಸಾದ ವಿತರಣೆ, ಮಧ್ಯಾಹ್ನ ಪ್ರಸಾದ ಭೋಜನ ಕೂಡ ನಡೆಯಲಿದೆ.
ಭಕ್ತಾದಿಗಳು ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಳ್ಳಲು ಅವಕಾಶ ಇದ್ದು, ಅಕ್ಕಿ, ಕಾಯಿ, ಬೆಲ್ಲ, ತುಪ್ಪ, ತರಕಾರಿ ಇತರ ಸುವ ವಸ್ತುಗಳನ್ನು ನೀಡಬಹುದಾಗಿದೆ. ವಿವರಗಳಿಗೆ 8277419657 ಗೆ ಸಂಪರ್ಕ ಮಾಡಬಹುದಾಗಿದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ವಿ.ಶ್ರೀನಿವಾಸ ಭಟ್ಟ ಮಂಜುಗುಣಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.