ಯಲ್ಲಾಪುರ:ರಷ್ಯಾ-ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಶೆಲ್ ದಾಳಿಗೆ ಮೃತಪಟ್ಟ ವೈದ್ಯಕೀಯ ವಿದ್ಯಾರ್ಥಿ, ಹಾವೇರಿ ಜಿಲ್ಲೆಯ ಚಳಗೇರಿಯ ನವೀನ್ ರಾಜಶೇಖರ ಗ್ಯಾನ ಗೌಡ ಅವರಿಗೆ ಶುಕ್ರವಾರ ಸಂಜೆ ಯಲ್ಲಾಪುರ ಪಟ್ಟಣದಲ್ಲಿ ಶೃದ್ಧಾಂಜಲಿ ಸಲ್ಲಿಸಲಾಯಿತು.
ನಾಗರಿಕ ವೇದಿಕೆಯು ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ ಮಾತನಾಡಿ, ಜಗತ್ತು ಇಂದು ಜಾಗತೀಕರಣದ ಕಾಲಘಟ್ಟದಲ್ಲಿದೆ. ಯುದ್ಧ ಸಂಭವಿಸಿದಾಗ ಯುದ್ಧದ ಪ್ರತ್ಯಕ್ಷ ಹಾಗೂ ಪರೋಕ್ಷ ಪರಿಣಾಮವು ಜಗತ್ತಿನ ಎಲ್ಲ ದೇಶಗಳ ಮೇಲೂ ಆಗುತ್ತದೆ. ಯುದ್ಧವು ಕೊನೆಗೊಂಡು ಶಾಂತಿ ನೆಲೆಸುವಂತಾಗಲಿ. ನವೀನ್ ಸಾವು ನೋವಿನ ಸಂಗತಿಯಾಗಿದೆ ಎಂದರು.
ನಾಗರಿಕ ವೇದಿಕೆಯ ಅಧ್ಯಕ್ಷ ರಾಮು ನಾಯ್ಕ ಮಾತನಾಡಿ, ಯಾವುದೇ ಸಮಸ್ಯೆ ಹಾಗೂ ಬಿಕ್ಕಟ್ಟಿಗೆ ಯುದ್ಧವೊಂದೇ ಪರಿಹಾರವಲ್ಲ. ಮಾತುಕತೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಮೂಲಕ ರಷ್ಯಾ-ಉಕ್ರೇನ್ ಯುದ್ಧ ಕೊನೆಗೊಂಡು ಜಗತ್ತಿನಲ್ಲಿ ಶಾಂತಿ ನೆಲಸಲಿ, ಯುದ್ಧದಲ್ಲಿ ಮಡಿದವರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.
ಪತ್ರಕರ್ತ ಜಿ.ಎನ್.ಭಟ್ ತಟ್ಟಿಗದ್ದೆ ಮಾತನಾಡಿ ಯುದ್ಧದ ಸಂದರ್ಭದಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.ಮೌನಾಚರಣೆ ಹಾಗೂ ನವೀನ್ ಭಾವಚಿತ್ರಕ್ಕೆ ಮೊಂಬತ್ತಿ ಬೆಳಗಿ ಪುಷ್ಪನಮನ ಸಲ್ಲಿಸಲಾಯಿತು.
ಪಟ್ಟಣ ಪಂಚಾಯತಿ ಸದಸ್ಯರಾದ ಸೋಮೇಶ್ವರ ನಾಯ್ಕ, ಸತೀಶ ನಾಯಕ್, ಪ್ರಮುಖರಾದ ನಾಗೇಶ ಯಲ್ಲಾಪುರಕರ್,ಗಜಾನನ ನಾಯ್ಕ,ವಿನೋದ ತಳೇಕರ್,ಬಾಬಾ ಸಾಬ್ ಆಲನ್ ಮುಂತಾದವರು ಇದ್ದರು. ಕೇಬಲ್ ನಾಗೇಶ ನಿರ್ವಹಿಸಿದರು. ನಾರಾಯಣ ನಾಯಕ ವಂದಿಸಿದರು.