ಶಿರಸಿ: ಬಜಗಾಂವ ಗ್ರಾಮದ ಚನ್ನಾಪೂರ ಕೆರೆಯ ಬಳಿಯ ಬಸಳೇಕೊಪ್ಪದ ಅಕ್ಬರ ಪ್ಲಾಟನಲ್ಲಿ ಅರಣ್ಯ ಇಲಾಖೆಯವರು ಮನೆ ಕಿತ್ತು ಹಾಕಿದ್ದಾರೆ ಎನ್ನುವ ಮಾಹಿತಿಯನ್ನು ಆಧರಿಸಿ ಸ್ಥಳಕ್ಕೆ ಭೇಟಿ ನೀಡಿದಾಗ ಅರಣ್ಯ ಭೂಮಿಯನ್ನು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಸಿಕ್ಕಂತೆ ಮಾಹಿತಿ ಕಲೆ ಹಾಕಿ ಇಸಫ್ ಹಾಗೂ ರೇಹಮಾನ್ ಎನ್ನುವ ವ್ಯಕ್ತಿಗಳು ಹಲವು ಜನರಿಗೆ ಅರಣ್ಯ ಜಾಗ ಮಾರಾಟ ಮಾಡಿ ಹಣ ವಂಚಿಸಿರುವುದು ಬೆಳಕಿಗೆ ಬಂದಿದೆ ಎಂದು ಅಕ್ಷರಕ್ರಾಂತಿ ಸುದ್ದಿವಾಹಿನಿ ಮುಖ್ಯಸ್ಥ ನಾಗರಾಜ ನಾಯ್ಕ ಕಾರವಾರ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಇವರಿಗೆ ಅರಣ್ಯ ಇಲಾಖೆ ಸಿಬ್ಬಂದಿಗಳು, ಮನೆ ನಂಬರ ನೀಡುವ ಗ್ರಾಮ ಪಂಚಾಯತಿಯ ಸಿಬ್ಬಂದಿಗಳು ಹಾಗೂ ಪ್ರಭಾವಿ ವ್ಯಕ್ತಿಗಳು ಸೇರಿಕೊಂಡು ವಂಚಿಸಿ ಇರುವ ಬಗ್ಗೆ ದಾಖಲೆಗಳು ಲಭ್ಯವಾಗಿದ್ದು, ಈ ಪ್ರದೇಶದಲ್ಲಿ ಹಲವಾರು ಮನೆಗಳು ಅರಣ್ಯ ಜಾಗದಲ್ಲಿ ನಿರ್ಮಾಣ ಹಂತದಲ್ಲಿದೆ ಹಾಗೂ ಕೆಲವು ಮನೆಗಳು ಪೂರ್ಣಗೊಂಡು ಸದ್ಯದಲ್ಲೇ ಗೃಹಪ್ರವೇಶವಾಗಿರುವ ಬಗ್ಗೆ ವಿಡಿಯೋ ಹಾಗೂ ಪೋಟೋಗಳು ಲಭ್ಯವಾಗಿವೆ.
ಶಿರಸಿ ಸುತ್ತಮುತ್ತ ಅರಣ್ಯ ಭೂಮಿಯನ್ನು ಸೈಟ್ ಮಾಡಿ ಮಾರಾಟ ಮಾಡುತ್ತಿರುವ ತಂಡಗಳು ಕಾರ್ಯ ನಿರ್ವಹಿಸುತ್ತಿರುವದನ್ನು ಇದರಿಂದ ಗಮನಿಸಬಹುದು. ಇವರಿಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಗ್ರಾಮ ಪಂಚಾಯತ ಸಿಬ್ಬಂದಿಗಳು ಅಥವಾ ಅಧಿಕಾರಿಗಳು ಹಾಗೂ ಪ್ರಭಾವಿ ವ್ಯಕ್ತಿಗಳ ಬೆಂಬಲದಿಂದಾಗಿ ಈ ವಂಚನೆಗಳು ನಡೆಯುತ್ತಿವೆ. ಈ ಎಲ್ಲಾ ವ್ಯಕ್ತಿಗಳು ಸೇರಿ ಅರಣ್ಯ ಇಲಾಖೆಯ ಜಾಗವನ್ನು ಮಾರಾಟ ಮಾಡಿ ಕೋಟ್ಯಾಂತರ ರೂಪಾಯಿ ವಂಚಿಸುತ್ತಿದ್ದಾರೆ ಎಂದು ತಿಳಿಸಿ ಸೂಕ್ತ ತನಿಖೆ ನಡೆಸಿ ತಪ್ಪಿಸ್ಥರ ಮೇಲೆ ಕಾನೂನು ಕ್ರಮ ಜರುಗಿಸಿಬೇಕೆಂದು ಮನವಿ ಮಾಡಿದ್ದಾರೆ.