ಭಟ್ಕಳ: ಅರಣ್ಯವಾಸಿಗಳ ಜಾಗೃತೆಯ ಅಂಗವಾಗಿ ಭಟ್ಕಳ ತಾಲೂಕಿನ ೨೦ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ೮೯ ಹಳ್ಳಿಗಳಲ್ಲಿ ಮಾರ್ಚ ೬ ರಿಂದ ಮೂರು ದಿನಗಳ ಕಾಲ ಅರಣ್ಯವಾಸಿಗಳನ್ನು ಉಳಿಸಿ-ಜಾಥ ಭಟ್ಕಳ ತಾಲೂಕಿನಾದ್ಯಂತ ಸಂಚರಿಸಲಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲೂಕಿನಲ್ಲಿ ಅರಣ್ಯವಾಸಿಗಳನ್ನು ಉಳಿಸಿ ಜಾಥವನ್ನು ಬೆಳಕೆ ಗ್ರಾಮ ಪಂಚಾಯತ ವ್ಯಾಪ್ತಿಯ ಕಾನಮೊದ್ಲು ಶಾಲೆಯ ಹತ್ತಿರ ಮಾರ್ಚ, ೬ ಮುಂಜಾನೆ ೯:೦೦ ಗಂಟೆಗೆ ಉದ್ಘಾಟನೆಗೊಳ್ಳಲಿದೆ.
ಅರಣ್ಯವಾಸಿಗಳನ್ನು ಉಳಿಸಿ ಜಾಥವು ಉತ್ತರ ಕನ್ನಡ ಜಿಲ್ಲೆಯಲ್ಲಿ ೩೦ ದಿನಗಳಲ್ಲಿ ೧೦೦೦ ಕೀ.ಮೀ ‘ಹೋರಾಟದ ವಾಹನ’ ಸಂಚರಿಸಿ ೫೦೦ ಹಳ್ಳಿಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಈಗಾಗಲೇ ಜಾಥವು ಕುಮಟ ತಾಲೂಕಿನಲ್ಲಿ ಉದ್ಘಾಟನೆಗೊಂಡು ಗ್ರಾಮೀಣ ಭಾಗದ ಅರಣ್ಯವಾಸಿಗಳಿಗೆ ಜಾಗೃತ ಮೂಡಿಸುವ ಕಾರ್ಯಕ್ರಮ ಜರಗುತ್ತಿದೆ.
ಅರಣ್ಯವಾಸಿಗಳ ಕಾನೂನು ಅಂಶ, ಭೂಮಿ ಹಕ್ಕಿಗೆ ಸಂಬಂಧಿಸಿದ ಪ್ರಕ್ರಿಯೆ, ಅರಣ್ಯ ಇಲಾಖೆಯ ದೌರ್ಜನ್ಯ ಹಾಗೂ ಅರಣ್ಯ ಭೂಮಿ ಹಕ್ಕಿಗೆ ಸಂಬಂಧಿಸಿ ಹಳ್ಳಿಗಳಿಗೆ ಭೇಟ್ಟಿಕೊಟ್ಟಂತಹ ಸಂದರ್ಭದಲ್ಲಿ ಅರಣ್ಯವಾಸಿಗಳಿಗೆ ಮಾಹಿತಿ ನೀಡಲಾಗುವುದು, ಆಸಕ್ತ ಅರಣ್ಯವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಾಥದ ಪ್ರಯೋಜನ ಪಡೆದುಕೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.