ಶಿರಸಿ:ಕಳೆದ 36 ವರ್ಷಗಳಿಂದ ಹೆಗಡೆಕಟ್ಟಾದ ಗಜಾನನ ಸೆಕೆಂಡರಿ ಸ್ಕೂಲ್ ನಲ್ಲಿ ಚಿತ್ರಕಲಾ ಶಿಕ್ಷಕರಾಗಿ ಅನನ್ಯ ಸೇವೆ ಸಲ್ಲಿಸಿ ನಿವೃತ್ತರಾದ ಎಸ್. ಆರ್. ಹೆಗಡೆ ಸರಕುಳಿ ಇವರನ್ನು ಶಾಲಾ ಸಂಸ್ಥೆಯ ಅಧ್ಯಕ್ಷರು ಹಾಗೂ ಸದಸ್ಯರು, ಶಾಲಾ ಶಿಕ್ಷಕ ವೃಂದ ಹಾಗೂ ಅವರ ಅಪಾರ ಅಭಿಮಾನಿಗಳು ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಟ್ಟರು.
ಈ ಸಂದರ್ಭದಲ್ಲಿ ಸನ್ಮಾನಿತರಾದ ಎಸ್.ಆರ್. ಹೆಗಡೆ ತಾವು ವೃತ್ತಿಗೆ ಸೇರಿದಾಗಿನಿಂದ ಇಂದಿನವರೆಗೆ ಸಹಕರಿಸಿದ ಎಲ್ಲರನ್ನೂ ಸ್ಮರಿಸಿ ವಂದಿಸಿದರು. ಹಾಗೆಯೇ ಸಂಸ್ಥೆಗೆ 50 ಸಾವಿರ ರೂ.ಗಳನ್ನು ದೇಣಿಗೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅಭಿನಂದನಾ ಭಾಷಣ ಮಾಡಿದ ಗಣಪತಿ ಭಟ್ಟ ಕಿಬ್ಬಳ್ಳಿಯವರು “ಅಯೋಗ್ಯ ವ್ಯಕ್ತಿಗಳು ಈ ಭೂಮಿಯಲ್ಲೇ ಇಲ್ಲ. ಪ್ರತಿಯೊಬ್ಬರೂ ಹುಟ್ಟುತ್ತಲೇ ಪ್ರತಿಭೆಯನ್ನು ಹೊತ್ತುಕೊಂಡೇ ಬಂದಿರುತ್ತಾರೆ. ಅವರ ಪ್ರತಿಭೆಯನ್ನು ಹೊರತರುವ ಕೆಲಸ ಶಿಕ್ಷಕರಿಂದ ಆಗಬೇಕು. ಆ ಕೆಲಸವನ್ನು ಇಂದು ನಿವೃತ್ತರಾಗುತ್ತಿರುವ ಎಸ್. ಆರ್. ಹೆಗಡೆಯವರು ಮಾಡಿರುತ್ತಾರೆ ಎನ್ನುವುದಕ್ಕೆ ಇಲ್ಲಿ ಸೇರಿರುವ ಹಳೆಯ ವಿದ್ಯಾರ್ಥಿಗಳು ಮತ್ತು ಅಭಿಪ್ರಾಯ ಹಂಚಿಕೊಂಡಿರುವವರ ಮಾತುಗಳೇ ಸಾಕ್ಷಿ. ಹಾಗೆಯೇ ಹಲವು ವಿದ್ಯಾರ್ಥಿಗಳು ಎಸ್. ಆರ್. ಹೆಗಡೆಯವರ ನೀತಿ ಬೋಧನೆಗಳಿಂದ, ಚಿತ್ರಕಲಾ ಮಾರ್ಗದರ್ಶನದಿಂದಲೇ ಜೀವನವನ್ನು ಕಟ್ಟಿಕೊಂಡಿದ್ದೇವೆ ಎಂದು ಹೇಳಿದ್ದಾರೆ ಎಂದ ಮೇಲೆ ಅವರ ಜೀವನ ಧನ್ಯ” ಎಂದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ.ಎಸ್. ಹೆಗಡೆಯವರು ಎಸ್.ಆರ್.ಹೆಗಡೆಯವರ ಅಗಣಿತ ಸೇವೆಯನ್ನು ಸ್ಮರಿಸಿದರು.
ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸೆಕೆಂಡರಿ ಸ್ಕೂಲ್ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷರಾದ ಎಂ. ಆರ್. ಹೆಗಡೆ ಅವರು ಮಾತನಾಡಿ, ನಿವೃತ್ತ ಜೀವನಕ್ಕೆ ಶುಭ ಹಾರೈಸಿ, ಎಸ್. ಆರ್. ಹೆಗಡೆಯವರು ವೃತ್ತಿಯಿಂದ ನಿವೃತ್ತರಾದರೂ, ಭವಿಷ್ಯದಲ್ಲಿ ಅವರ ಸಹಾಯ ಸಹಕಾರ ಪೂರ್ಣ ಪ್ರಮಾಣದಲ್ಲಿ ಶಾಲೆಗೆ ಲಭಿಸಲಿ ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರು ಹಾಜರಿದ್ದರು. ಶಾಲಾ ನಿವೃತ್ತ ಮುಖ್ಯಾಧ್ಯಾಪಕರಾದ ವಿ.ಪಿ.ಹೆಗಡೆ ಹನುಮಂತಿ, ಹೆಗಡೆಕಟ್ಟಾ ಗ್ರಾಮ ಪಂಚಾಯತ ಅಧ್ಯಕ್ಷರಾದ ವೀಣಾ ಭಟ್ಟ ಹಾಗೂ ಶಾಲಾ ಮುಖ್ಯಾಧ್ಯಾಪಕರಾದ ಶೈಲೇಂದ್ರ ಎಂ.ಎಚ್. ಅವರು ಉಪಸ್ಥಿತರಿದ್ದರು.
ಶಿಕ್ಷಕರಾದ ಎಂ. ಎಸ್. ಗೌಡ ಅವರು ಸ್ವಾಗತಿಸಿದರೆ, ಕೆ. ಎನ್. ನಾಯ್ಕ ಅವರು ವಂದಿಸಿದರು. ಆರ್. ಎನ್. ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.