ಯಲ್ಲಾಪುರ: ಸಂಗೀತ ಮನಸ್ಸಿಗೆ ಆನಂದ ನೀಡುವ ಜೊತೆಗೆ ನಮ್ಮನ್ನೇ ನಾವು ಮರೆಯುವಂತೆ ಮಾಡುವ ವಿಶಿಷ್ಟ ಶಕ್ತಿ ಹೊಂದಿದೆ ಎಂದು ವಿದ್ವಾಂಸ ಡಾ.ಕೆ.ಗಣಪತಿ ಭಟ್ಟ ಹೇಳಿದರು.
ಅವರು ತಾಲೂಕಿನ ಶಿರನಾಲಾದಲ್ಲಿ ಗೋಕುಲ ಬಾನ್ಸುರಿ ಗುರುಕುಲ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಕರ್ನಾಟಕ ಬ್ಯಾಂಕ್ ಮಂಗಳೂರು, ಕೆ.ಡಿ.ಸಿ.ಸಿ. ಬ್ಯಾಂಕ್ ಶಿರಸಿ ಮತ್ತು ಕೆನರಾ ಬ್ಯಾಂಕ್ ಮಂಚಿಕೇರಿ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ಗೋಕುಲ ಉತ್ಸವ- 13 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗೋಕುಲದ ಮುಖ್ಯಸ್ಥ ನಾಗರಾಜ ಹೆಗಡೆ ಇದ್ದರು.
ನಂತರ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಗೋಕುಲದ ವಿದ್ಯಾರ್ಥಿ ಗಣೇಶ ಹೆಗಡೆ ಗೇರಾಳ ಬಾನ್ಸುರಿ ವಾದನ ಪ್ರಸ್ತುತಪಡಿಸಿದರು. ಗಣೇಶ ಗುಂಡ್ಕಲ್ ತಬಲಾ ಸಹಕಾರ ನೀಡಿದರು.
ಪ್ರಕಾಶ ಹೆಗಡೆ ಕಲ್ಲಾರೆಮನೆ ಅವರ ಬಾನ್ಸುರಿ ವಾದನಕ್ಕೆ ಕಾರ್ತಿಕ್ ಡಿ., ಬೆಂಗಳೂರು ತಬಲಾ ಸಾಥ್ ನೀಡಿದರು. ಖ್ಯಾತ ಗಾಯಕ ಪಂ. ಡಾ. ರಾಮ ದೇಶಪಾಂಡೆ ಅವರ ಗಾಯನ ಕಲಾಸಕ್ತರ ಮನಗೆದ್ದಿತು. ಸಂವಾದಿನಿಯಲ್ಲಿ ಗುರುಪ್ರಸಾದ ಹೆಗಡೆ ಗಿಳಿಗುಂಡಿ ಮತ್ತು ತಬಲಾದಲ್ಲಿ ಶ್ರೀಧರ ಮಾಂಡ್ರೆ ಧಾರವಾಡ ಸಹಕರಿಸಿದರು.