ಶಿರಸಿ: ಜ್ಞಾನಪೀಠ ಪುರಸೃತ ವರಕವಿ ದ.ರಾ. ಬೇಂದ್ರೆಯವರ ಸಾಹಿತ್ಯ ಜೀವನದ ದರ್ಶನ ಮಾಡಿಸುತ್ತದೆ ಎಂದು ಧಾರವಾಡದ ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಅಧ್ಯಕ್ಷರಾದ ಡಾ ಡಿ.ಎಂ. ಹಿರೇಮಠರವರು ಹೇಳಿದರು.
ನಗರದ ಜನನಿ ಮ್ಯೂಸಿಕ ಸಂಸ್ಥೆ (ರಿ) ಹಾಗೂ ದ.ರಾ. ಬೇಂದ್ರ ರಾಷ್ಟ್ರೀಯ ಸ್ಮಾರಕ ಟ್ರಸ್ಟ ಧಾರವಾಡ ಇವುಗಳ ಸಂಯುಕ್ತ ಶಿರಸಿ ಟಿ.ಆರ್.ಸಿ. ಬ್ಯಾಂಕ್ ಸಭಾಭವನದಲ್ಲಿ ಭಾನುವಾರ ಸಂಘಟಿಸಲಾದ ‘’ಬೇಂದ್ರೆ ನಮನ’’ ಎಂಬ ವಿಶೇಷ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬೇಂದ್ರೆ ಅವರ ಸಾಹಿತ್ಯದ ಓದು ನಿರಂತರವಾಗಿ ನಡೆಯುತ್ತಿರಬೇಕು. ಸಾಮಾನ್ಯ ಜೀವನವನ್ನು ಅನುಸರಿಸಿ ಅಸಮಾನ್ಯ ಕಾವ್ಯ ರಚಿಸಿದ ಬೇಂದ್ರೆ ಸಾಹಿತ್ಯದ ಓದು ವಿಸ್ತರಿಸುವ ಕಾರ್ಯ ಇನ್ನಷ್ಟು ನಡೆಯಬೇಕಿದೆ ಎಂದರು.
ಕಾರ್ಯಕ್ರಮದ ಅತಿಥಿಯಾಗಿದ್ದ ಮೈಸೂರು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ದಿವಾಕರ ಕೆರೆಹೊಂಡ ಮಾತನಾಡಿ ಪ್ರಕೃತಿಯ ಸಾಮಾನ್ಯ ವಿಷಯದಿಂದ ಪರಮೇಷ್ಠಿವರೆಗಿನ ವಿಷಯವನ್ನು ವಿಶೇಷ ಪ್ರತಿಮೆಯೊಂದಿಗೆ ತಿಳಿಸುವ ಬೆಂದ್ರೆ ಸಾಹಿತ್ಯದ ಹಾಡು ಅವರು ಬರೆದ ಸಂದರ್ಭಕ್ಕೆ ಅನುಗುಣವಾಗಿಯೇ ಹಾಡಲ್ಪಟ್ಟರೆ ವಿಶೇಷ ಅರ್ಥ ಬರುತ್ತದೆ ಎಂದರು.
ಇನ್ನೊಬ್ಬ ಅತಿಥಿ ಶಿರಸಿ ರೋಟರಿ ಕ್ಲಬ್‍ನ ಮಾಜಿ ಅಧ್ಯಕ್ಷ ಅನಂತ ಪದ್ಮನಾಭ ಮಾತನಾಡುತ್ತ ಬೇಂದ್ರೆ ಸಾಹಿತ್ಯ ವಿವಿಧ ಮಜಲುಗಳ ಕುರಿತಾಗಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಚಾರ್ಯ ಪ್ರೋ.ಕೆ. ಎನ್. ಹೊಸ್ಮನಿಯವರು ಮಾತನಾಡುತ್ತ ವಿದ್ಯಾರ್ಥಿ ಜೀವನದಲ್ಲಿ ಬೇಂದ್ರೆ ಸಾಹಿತ್ಯದ ಕಡೆ ಗಮನ ಹರಿಸಿದರೆ ಸಾಧಕನ ಜೀವನ ಕೂಡಾ ಉದ್ದಾರವಾಗುತ್ತದೆ ಎಂದರು.
ಜನನಿ ಮ್ಯೂಸಿಕ್ ಸಂಸ್ಥೆಯ ದಿನೇಶ ಹೆಗಡೆ ಪ್ರಾಸ್ಥಾವಿಕ ಮಾತನಾಡಿ ಸ್ವಾಗತಿಸಿದರು.
ಗಿರಿಧರ ಕಬ್ನಳ್ಳಿ ಕಾರ್ಯಕ್ರಮ ನಿರೂಪಪಿಸಿದರೆ ಪ್ರೋ. ಎಸ್. ಎಮ್. ಹೆಗಡೆ ಕೊನೆಯಲ್ಲಿ ವಂದಿಸಿದರು. ತದನಂತರದಲ್ಲಿ ಬೇಂದ್ರೆಯವರ ಸಾಹಿತ್ಯದ ಕೃತಿಗಳ ಗಾಯನ ಕಾರ್ಯಕ್ರಮ ನಡೆಯಿತು.