ಸಿದ್ದಾಪುರ: ಗ್ರಾಮೀಣ ಪ್ರದೇಶದಲ್ಲಿ ಯುವಕರು ಇಂತಹ ಟೂರ್ನಿಗಳನ್ನು ಹೆಚ್ಚು ಹೆಚ್ಚು ಆಯೋಜನೆ ಮಾಡಬೇಕು. ಈ ಮೂಲಕ ಗ್ರಾಮೀಣ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಯುವಕರ ಭಾಗವಹಿಸುವಿಕೆ ಇನ್ನಷ್ಟು ಹೆಚ್ಚಬೇಕು ಎಂದು ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ ಅವರು ಹೇಳಿದರು.
ಸಿದ್ದಾಪುರ ತಾಲೂಕಿನ ಹಸರಗೋಡ್ ಪಂಚಾಯತ್ ವ್ಯಾಪ್ತಿಯ ಹೊಸ್ಮನೆಯ ಜಡ್ಡಿ ಕ್ರಿಕೆಟ್ ಮೈದಾನದಲ್ಲಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮುಖ್ಯ ಅಭ್ಯಾಗತರಾಗಿ ಆಗಮಿಸಿದ ಅವರು, ಕರೋನ ಕಾರಣದಿಂದ ಎಲ್ಲೆಡೆ ವರ್ಕ್ ಫ್ರಾಮ್ ಹೋಮ್ ಹೆಚ್ಚಾಗಿದೆ. ನಗರವಾಸಿಯಾಗಿದ್ದ ಯುವಕರು ಗ್ರಾಮೀಣ ಭಾಗದ ಕಡೆಗೆ ಮುಖ ಮಾಡುತ್ತಿದ್ದಾರೆ. ಈ ವರ್ಕ್ ಫ್ರಾಮ್ ಹೋಮ್ ನಡುವೆಯೂ ತಮ್ಮ ತಮ್ಮ ಊರುಗಳಲ್ಲಿ ಕ್ರೀಡಾಕೂಟದಂತಹ ಕ್ರಿಯಾಶೀಲ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದ ಆಕರ್ಷಕ ಟ್ರೋಫಿಯನ್ನು ಅನಾವರಣಗೊಳಿಸಿ ಮಾತನಾಡಿದ ರಾಜದೀಪ ಟ್ರಸ್ಟ್ ಅಧ್ಯಕ್ಷ ದೀಪಕ್ ಹೆಗಡೆ ದೊಡ್ಡೂರು ಮಾತನಾಡಿ, ಕರೋನಾ ಕಾರಣದಿಂದ ಸಭೆ, ಸಮಾರಂಭ,. ಕ್ರೀಡಾಕೂಟಗಳು ಬಹಳ ಕಡಿಮೆ ಸಂಖ್ಯೆಯಲ್ಲಿ ನಡೆಯುತ್ತಿದ್ದವು. ಆದರೆ ಯುವಕರ ಆಸಕ್ತಿ ಹಾಗೂ ಕ್ರಿಯಾಶೀಲ ಮನೋಭಾವದ ಕಾರಣ ಇತ್ತೀಚಿನ ದಿನಗಳಲ್ಲಿ ಇವುಗಳು ಮತ್ತಷ್ಟು ಹೆಚ್ಚಳವಾಗುತ್ತಿರುವುದು ಸಂತೋಷದ ವಿಷಯ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಮಾಜ ಸೇವಕ ಶ್ರೀಪಾದ್ ಹೆಗಡೆ ಕಡವೆ ಮಾತನಾಡಿ, ಅಘನಾಶಿನಿಯ ಕೊಳ್ಳ ಪ್ರದೇಶದಲ್ಲಿ ಇಂತಹ ಟೂರ್ನಿಯನ್ನು ಹಮ್ಮಿಕೊಳ್ಳುವುದು ಸುಲಭದ ವಿಷಯವಲ್ಲ. ಇಂತಹ ಟೂರ್ನಿಗಳು ಪ್ರತಿವರ್ಷ ಇನ್ನಷ್ಟು ಹೆಚ್ಚುವಂತಾಗಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಮಾಜ ಸುಧಾರಕ ಸುಬ್ರಾಯ ಭಟ್ ಹಿತ್ಲಕೈ ಅವರು ಮಾತನಾಡಿ, ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಹೆಮ್ಮೆಯ ವಿಷಯ. ಸಂಘಟನೆ ಮಾಡುವುದು ಸುಲಭದ ಕೆಲಸವಲ್ಲ. ಈಗಿನ ಕಾಲದಲ್ಲಿ, ಇಂತಹ ಪ್ರದೇಶದಲ್ಲಿ ಇಷ್ಟು ಚನ್ನಾಗಿ ಕಾರ್ಯಕ್ರಮ ಆಯೋಜಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಕೋಡ್ಸರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಘುಪತಿ ವಿ. ಹೆಗಡೆ ದಂಟಕಲ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಹಸರಗೋಡ ಗ್ರಾ.ಪಂ. ಸದಸ್ಯ ಚಿನ್ಮಯ ಭಟ್ ಹಾಗೂ ಕನಸೂರು ಗ್ರಾಮ ಪಂಚಾಯತ್ ಸದಸ್ಯ ಕೃಷ್ಣಮೂರ್ತಿ ಹೆಗಡೆ ಅವರು ಉಪಸ್ಥಿತರಿದ್ದರು. ವಿನಯ್ ದಂಟಕಲ್ ನಿರೂಪಣೆ ಮಾಡಿದರು. ಸಂತೋಷ್ ಹೆಗಡೆ ದಂಟಕಲ್ ಸ್ವಾಗತಿಸಿದರು. ನಿಕೇತನ್ ಭಟ್ ಬೆಂಗಳೂರು ಅವರು ವಂದಿಸಿದರು.
ಅಘನಾಶಿನಿ ಗೆಳೆಯರ ಬಳಗವು ಪ್ರಪಥಮ ಬಾರಿಗೆ ಆಯೋಜಿಸಿದ ಹೊನಲು ಬೆಳಕಿನ ರಾಜ್ಯ ಮಟ್ಟದ ಆಹ್ವಾನಿತ ತಂಡಗಳ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸರಕುಳಿಯ ಡ್ರೀಮ್ 8 ತಂಡವು ಚಾಂಪಿಯನ್ ಆಗಿ ಹೊರ ಹೊಮ್ಮುವ ಮೂಲಕ ಸೂಪರ್ ಸ್ಟೀಲ್ ಕಪ್ ಅನ್ನು ತನ್ನದಾಗಿಸಿಕೊಂಡಿತು.
ದಂಟಕಲ್-ಕುಚಗುಂಡಿ ಬಳಿಯ ಹೊಸ್ಮನೆ ಜಡ್ಡಿ ಕ್ರಿಕೆಟ್ ಮೈದಾನದಲ್ಲಿ ಶನಿವಾರ ನಡೆದ ಆಕರ್ಷಕ ಟೂರ್ನಿಯಲ್ಲಿ ಕಾನಗೋಡಿನ ಕೆಸಿಎಲ್ ತಂಡವು ರನ್ನರ್ ಅಪ್ ಆಗಿ ಹೊರಹೊಮ್ಮಿತು. ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಕೆಸಿಎಲ್ ತಂಡದ ಮಹೇಶ್ ಹೆಗಡೆ ಅವರು ಪಡೆದುಕೊಂಡರೆ, ಟೂರ್ನಿಯ ಅತ್ಯುತ್ತಮ ಬೌಲರ್ ಆಗಿ ಗೇಂ ಚೇಂಜರ್ಸ್ ತಂಡದ ಶ್ರೀಶ ಅವರು ಹೊಮ್ಮಿದರು. ಬೆಸ್ಟ್ ಆಲ್ರೌಂಡರ್ ಆಗಿ ಡ್ರೀಮ್ 8 ತಂಡದ ಮಯೂರ್ ಹೆಗಡೆ, ಬೆಸ್ಟ್ ಬ್ಯಾಟ್ಸಮನ್ ಆಗಿ ಯುಕೆ ಬಾಯ್ಸ್ ತಂಡದ ಗಣೇಶ್ ಭಾಗ್ವತ್ ಹೊರಹೊಮ್ಮಿದರು. ಸರಣಿಯಲ್ಲಿ ಉತ್ತಮವಾಗಿ ಆಡುವ ಮೂಲಕ ಎಲ್ಲರ ಮನಸ್ಸನ್ನು ಗೆದ್ದುಕೊಂಡ ಯುಕೆ ಬಾಯ್ಸ್ ತಂಡವು ಫೇರ್ ಪ್ಲೆ ಅವಾರ್ಡ್ ಮುಡಿಗೇರಿಸಿಕೊಂಡಿತು.