ಶಿರಸಿ:ಅಧಿವಕ್ತಾ ಪರಿಷತ್, ಕರ್ನಾಟಕ ಉತ್ತರ ಹಾಗೂ ಎಂ. ಇ. ಎಸ್. ಕಾನೂನು ಮಹಾವಿದ್ಯಾಲಯ ಶಿರಸಿ ಇವರ ಸಹಯೋಗದೊಂದಿಗೆ ವಕೀಲರಿಗೆ ವಿಭಾಗ ಕಾನೂನು ಶಿಕ್ಷಣ ವರ್ಗ ಶಿಬಿರ ಫೆ.27 ರಂದು ಶಿರಸಿಯ ಕಾನೂನು ಮಹಾವಿದ್ಯಾಲಯದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಎಂ. ಇ. ಎಸ್. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಿ.ಎಂ. ಹೆಗಡೆ ಮುಳಖಂಡ ಮಾತನಾಡಿ ವಕೀಲರು ಕಾನೂನು ಜ್ಞಾನವನ್ನು ಹೆಚ್ಚಿಸಿಕೊಂಡು ಸಮಾಜದಲ್ಲಿ ಕಟ್ಟಕಡೆಯ ವ್ಯಕ್ತಿಗಳಿಗೆ ಕಾನೂನು ನೆರವು ಲಭಿಸಲು ಯತ್ನಿಸಬೇಕು ಎನ್ನುತ್ತಾ ಅಧಿವಕ್ತಾ ಪರಿಷತ್ ಈ ದಿಶೆಯಲ್ಲಿ ಕಾರ್ಯೋನ್ಮುಖವಾಗಿರುವುದನ್ನು ಶ್ಲಾಘಿಸಿದರು.
ಅತಿಥಿಗಳಾಗಿ ಶಿರಸಿ ವಕೀಲರ ಸಂಘದ ಅಧ್ಯಕ್ಷ ಸಿ.ಎಫ್. ಈರೇಶ ಹಾಗೂ ಹುಬ್ಬಳ್ಳಿ ವಕೀಲರು ಮತ್ತು ಪರಿಷತ್ತಿನ ರಾಜ್ಯ ಕಾರ್ಯಕಾರಿಣಿ ಸದಸ್ಯರು ಆದ ವಿಠ್ಠಲ ನಾಯಕ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಪರಿಷತ್‍ನ ರಾಜ್ಯ ಉಪಾಧ್ಯಕ್ಷರಾದ ಮಂಜುಳಾ ಪಡೆಸೂರ ಅಧ್ಯಕ್ಷತೆ ವಹಿಸಿದ್ದರು.
ಕಾನೂನು ಪ್ರಶಿಕ್ಷಣ ವರ್ಗದ ಪ್ರಥಮ ಅಧಿವೇಶನದಲ್ಲಿ ಕ್ರಿಮಿನಲ್ ಟ್ರಯಲ್ ಕುರಿತು ವಿಷಯ ಮಂಡಿಸಿದ ಶಿರಸಿ ಹಿರಿಯ ವಕೀಲರಾದ ಆರ್.ಜಿ. ಎಹಗಡೆ ಕೇರಿಮನೆ ಮಾತನಾಡುತ್ತಾ “ಕ್ರಿಮಿನಲ್ ಪ್ರಕರಣಗಳಲ್ಲಿ ನಮ್ಮ ಹೆಚ್ಚಿನ ಕಾನೂನುಗಳು ಬ್ರಿಟೀಷರಿಂದ ಬಳುವಳಿಯಾಗಿ ಬಂದಿದ್ದು ನ್ಯಾಯ ವಿತರಣೆಯಲ್ಲಿ ತೊಡಕಾಗಿದೆ. ಇಂದಿನ ನ್ಯಾಯಾಂಗ ವ್ಯವಸ್ಥೆಯಲ್ಲಿ ಅಂಕೆ ಸಂಖ್ಯೆಗಳಿಗಾಗಿ ಆದೇಶಗಳನ್ನು ಪಡೆಯಬಹುದಾಗಿರುತ್ತದೆಯೇ ಹೊರತು ನ್ಯಾಯ ನಿರ್ಣಯವನ್ನಲ್ಲ. ಕಾನೂನಿನಂತೆ ನ್ಯಾಯವಾಗುತ್ತಿರುವುದನ್ನು ನಾನು ನೋಡುತ್ತಿದ್ದೇವೆ. ಅದು ನೈಜ ನ್ಯಾಯ ನಿರ್ಣಯವಾಗುತ್ತಿಲ್ಲ. ಈ ಕುರಿತು ಅಧಿವಕ್ತಾ ಪರಿಷತ್ ಹೆಚ್ಚಿನ ಚರ್ಚೆ ನಡೆಸಿ ಕ್ರಿಮಿನಲ್ ಪ್ರಕರಣದ ಕುರಿತಾದ ಕಾನೂನು ತಿದ್ದುಪಡಿಯಾಗುವಂತೆ ಮಾಡಲು ಚಿಂತನೆ ನಡೆಸಬೇಕಿದೆ’ ಎಂದರು.
ಸ್ಥಳೀಯ ಅಧಿವೇಶನದಲ್ಲಿ ನಿರ್ದಿಷ್ಟ ಪರಿಹಾರ ಅಧಿನಿಯಮದ ಕುರಿತು ಪರಿಷತ್ತಿನ ರಾಜ್ಯ ಉಪಾಧ್ಯಕ್ಷರಾದ ಸತೀಶ ಎಸ್. ರಾಯಚೂರ ವಿಷಯ ಮಂಡಿಸಿ ಚರ್ಚಿಸಿದರು.
ಸಮಾರೋಪ ಕಾರ್ಯಕ್ರಮದಲ್ಲಿ ಪರಿಷತ್‍ನ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ ಪವಾರ ಸಮಾರೋಪ ಭಾಷಣ ಮಾಡಿದರು.
ರಾಷ್ಟ್ರೀಯ ಪರಿಷತ್‍ನ ಸದಸ್ಯರಾದ ಶ್ರೀಮತಿ ಸರಸ್ವತಿ ಹೆಗಡೆ, ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಅಶೋಕ ಭಟ್ಕಳಅನಿಸಿಕೆ ವ್ಯಕ್ತಪಡಿಸಿದರು.
ಧಾರವಾಡ ಉಚ್ಚ ನ್ಯಾಯಾಲಯದ ವಕೀಲರೂ ಪರಿಷತ್‍ನ ರಾಜ್ಯ ಸಹಕಾರ್ಯದರ್ಶಿಗಳೂ ಆದ ಅವಿನಾಶ ಅಂಗಡಿ ಪ್ರಾಸ್ತಾವಿಕ ಮಾತನಾಡಿದರು.
ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಅಶೋಕ ಭಟ್ಕಳ ಸ್ವಾಗತಿಸಿದರು. ಶಿರಸಿಯ ನ್ಯಾಯವಾದಿ ಸಂತೋಷ ಹೆಗಡೆ ವಂದಿಸಿದರು. ವೇದಿಕೆಯಲ್ಲಿ ಅಧಿವಕ್ತಾ ಪರಿಷತ್‍ನ ಶ್ರೀಮತಿ ವನಮಾಲಾ ಮೋಟೆ, ಶ್ರೀಮತಿ ರೂಪಾ ಧವಳಗಿ ಉಪಸ್ಥಿತರಿದ್ದರು.
ಅಭ್ಯಾಸ ವರ್ಗದಲ್ಲಿ ಗದಗ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಉತ್ತರ ಕನ್ನಡ ಜಿಲ್ಲೆಯ ವಕೀಲರು ಶಿಬಿರಾರ್ಥಿಗಳಾಗಿ ಪಾಲ್ಗೊಂಡಿದ್ದರು.