ಸಿದ್ದಾಪುರ:ಪ್ರಶಸ್ತಿ, ಪ್ರಚಾರಕ್ಕಾಗಿ ಯಾವತ್ತೂ ಡಾ.ಆರ್.ಪಿ.ಹೆಗಡೆ ಸುಳಗಾರ ಅವರು ಸಾಹಿತ್ಯ ಕೃಷಿ ಮಾಡಿದವರಲ್ಲ. ಆದರೆ ಸಾಹಿತ್ಯ ಕ್ಷೇತ್ರದಲ್ಲಿನ ಅವರ ಸಾಧನೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಅವರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಬೇಕಿತ್ತು ಎಂದು ಜಾನಪದ ತಜ್ಞ ಡಾ.ಶ್ರೀಪಾದ ಶೆಟ್ಟಿ ಹೊನ್ನಾವರ ಹೇಳಿದರು.
ತಾಲೂಕಿನ ವಾಜಗದ್ದೆಯ ದುರ್ಗಾವಿನಾಯಕ ದೇವಸ್ಥಾನದ ಸಭಾಂಗಣದಲ್ಲಿ ದುರ್ಗಾವಿನಾಯಕ ಕೃಷಿಕ ಯುವಕ ಸಂಘ ಹಾಗೂ ದುರ್ಗಾವಿನಾಯಕ ಯಕ್ಷ ಮಿತ್ರಮಂಡಳಿ ಇವರ ಸಹಯೋಗದಲ್ಲಿ ದಿ.ಡಾ.ಆರ್.ಪಿ.ಹೆಗಡೆ ಸುಳಗಾರ ಅವರ ನೆನಪು-ನಮನ ಕಾರ್ಯಕ್ರಮದಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಅವರು ಶನಿವಾರ ಮಾತನಾಡಿದರು.
ಮೃದು ಸ್ವಭಾವದ, ಮೌನದಲ್ಲಿಯೇ ಎಲ್ಲವನ್ನು ತಿಳಿಸುವ, ತಿಳಿದುಕೊಳ್ಳುತ್ತಿದ್ದ ಅಪಾರ ಜ್ಞಾನವನ್ನು ಹೊಂದಿದ್ದ ಆರ್.ಪಿ.ಹೆಗಡೆ ಅವರು ಎಲ್ಲರನ್ನು ಪ್ರೀತಿಸುತ್ತಿದ್ದವರು. ಶರೀಪ್ ಮತ್ತು ಕಬೀರರ ಕುರಿತು ಬರೆದ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಬರಬೇಕಿತ್ತು. ಪ್ರತಿಯೊಬ್ಬರೂ ಮೊದಲು ತಮ್ಮ ಮನಸ್ಸನ್ನು ಗೆಲ್ಲಬೇಕು. ಹಾಗಾದಾಗ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಹೇಳಿ ಆರ್.ಪಿ.ಹೆಗಡೆ ಸುಳಗಾರ ಹಾಗೂ ತಮ್ಮ ಒಡನಾಟದ ಕುರಿತು ಮಾತನಾಡಿದರು.
ಸಾಹಿತಿ ಸುಬ್ರಾಯ ಮತ್ತೀಹಳ್ಳಿ ಮಾತನಾಡಿ ಡಾ.ಆರ್.ಪಿ.ಹೆಗಡೆ ಅವರದ್ದು ಏಕಲವ್ಯ ಸಾಧನೆ. ಸಂವೇಧನಾಶೀಲರಾಗಿ, ಕವಿಯಾಗಿ, ಲೇಖಕರಾಗಿ, ಉಪನ್ಯಾಸಕರಾಗಿ ಹಾಗೂ ಅನುವಾದಕರಾಗಿ ಸಾಹಿತ್ಯ ಕ್ಷೇತ್ರಕ್ಕೆ ಅದ್ಬುತವಾದ ಕೊಡುಗೆ ನೀಡಿದ್ದಾರೆ. ರಾಜ್ಯದ ಅತ್ತಯುತ್ತಮ ಅನುವಾದಕರಲ್ಲಿ ಒಬ್ಬರಾಗಿದ್ದರು ಎನ್ನುವುದು ಹೆಮ್ಮೆಯ ವಿಷಯವಾಗಿದೆ. ಅವರ ನೆನಪಿನಲ್ಲಿ ಪ್ರತಿ ವರ್ಷ ಕಾರ್ಯಕ್ರಮ ನಡೆಸಿದರೆ ಅದು ಅವರಿಗೆ ನೀಡುವ ಗೌರವ ಆಗುತ್ತದೆ ಎಂದು ಹೇಳಿದರು.
ದುರ್ಗಾವಿನಾಯಕ ದೇವಸ್ಥಾನದ ಮೊಕ್ತೇಸರ ಶ್ರೀಧರ ಎಂ.ಹೆಗಡೆ ಪೇಟೇಸರ ಅಧ್ಯಕ್ಷತೆವಹಿಸಿದ್ದರು. ಪತ್ರಕರ್ತ ಗಂಗಾಧರ ಕೊಳಗಿ, ಗೋಪಾಲ ಹೆಗಡೆ ವಾಜಗದ್ದೆ ಆರ್.ಪಿ.ಹೆಗಡೆ ಅವರ ಕುರಿತು ಮಾತನಾಡಿದರು. ಪತ್ರಕರ್ತ ನಾಗರಾಜ ಭಟ್ಟ ಕೆಕ್ಕಾರ ಅಭಿನಂದನಾ ಮಾತನಾಡಿದರು.
ವಿ.ಗೋಪಾಲ ಜೋಶಿ ವಾಜಗದ್ದೆ ವೇದಘೋಷ ಮಾಡಿದರು. ವರ್ಷಿಣಿ ಹೆಗಡೆ ಸುಳಗಾರ ಸ್ವಾಗತಿಸಿದರು. ಗೋಪಾಲ ಹೆಗಡೆ ಹುಲಿಮನೆ ಪ್ರಾಸ್ತಾವಿಕ ಮಾತನಾಡಿದರು. ಗಣಪತಿ ಹೆಗಡೆ ಸುಳಗಾರ ವಂದಿಸಿದರು. ವಿನಾಯಕ ಪೇಟೇಸರ, ಗೋಪಾಲ ಹೆಗಡೆ ಸುಳಗಾರ ಕಾರ್ಯಕ್ರಮ ನಿರ್ವಹಿಸಿದರು.