ಶಿರಸಿ:ಉತ್ತರಕನ್ನಡ ಸಾವಯವ ಒಕ್ಕೂಟದ ನೆಲಸಿರಿ ಸಾವಯವ ಉತ್ಪನ್ನಗಳ ಮಾರಾಟ ಮಳಿಗೆಗೆ ನಗರದ ಎಪಿಎಂಸಿ ಆವಾರದ ಪಿಎಲ್‍ಡಿ ಬ್ಯಾಂಕ್ ಕಟ್ಟಡದ ಮೊದಲನೇ ಮಹಡಿಯಲ್ಲಿ ಶನಿವಾರ ಸಂಜೆ ಚಾಲನೆ ನೀಡಲಾಯಿತು.
ಒಕ್ಕೂಟ ಮಳಿಗೆಯನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಿ ನಂತರ ಮಾತನಾಡಿ ಒಕ್ಕೂಟವು ಸಹಕಾರಿ ಆಂದೊಲನಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ. ಹೊಸಹೊಸ ರೋಗಗಳು ಇಂದು ಕಾಣಿಸುತ್ತಿವೆ. ಜೀವನ ಶೈಲಿ, ಆಹಾರ ಪದ್ಧತಿಯಿಂದ ಆರೋಗ್ಯ ವ್ಯವಸ್ಥೆ ಹದಗೆಡುತ್ತಿದೆ. ಹೆಚ್ಚುತ್ತಿರುವ ಅನಾರೋಗ್ಯ ಹತೋಟಿಗೆ, ಆರೋಗ್ಯ ರಕ್ಷಣೆಗೆ ಸಾವಯವ ಆಹಾರ ಉತ್ಪನ್ನಗಳ ಅಗತ್ಯತೆಯಿದೆ ಎಂದರು.
ಸಾವಯವ ಒಕ್ಕೂಟದ ಅಧ್ಯಕ್ಷ ವಿಶ್ವೇಶ್ವರ ಭಟ್ಟ ಕೋಟೆಮನೆ ಮಾತನಾಡಿ, ಸಾವಯವ ಒಕ್ಕೂಟ ಜಿಲ್ಲೆಯ 25ಸಂಘಗಳ ವ್ಯಾಪ್ತಿ ಹೊಂದಿದೆ. ಲಾಕ್‍ಡೌನ್ ಸಂದರ್ಭದಲ್ಲಿ 2.5ಕೋಟಿ ರೂ.ವ್ಯವಹಾರ ನಡೆಸಿದೆ ಎಂದರು.
ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಶ್ರೀಪಾದ ರಾಯಸದ್, ಕೆವಿಕೆ ಡಾ.ಎ.ಮಂಜು ಮುಂತಾದವರು ಉಪಸ್ಥಿತರಿದ್ದರು.
ಸಾವಯವ ಒಕ್ಕೂಟದ ಕುರಿತು:
ಕಳೆದ ಆರು ವರ್ಷಗಳಿಂದ ಜಿಲ್ಲೆಯಲ್ಲಿ ಸಾವಯವ ಕೃಷಿ ಉತ್ಪನ್ನಗಳ ಖರಿದಿ, ಮೌಲ್ಯವರ್ಧನೆ ಹಾಗೂ ಮಾರಾಟದಲ್ಲಿ ವಿಶಿಷ್ಟವಾದ ಹೆಜ್ಜೆಗುರುತು ಮೂಡಿಸಿರುವ ಒಕ್ಕೂಟ ಹೊಸ ಮಳಿಗೆಯಲ್ಲಿ ಸಾಂಪ್ರದಾಯಿಕ ತಳಿಯ ಅಕ್ಕಿ, ಜೇನುತುಪ್ಪ, ಸಾಂಬಾರ ಪದಾರ್ಥಗಳು, ಕೋಣನಕಟ್ಟೆ ಬೆಲ್ಲ, ಸ್ಕ್ವಾಷ್ ಸೇರಿದಂತೆ ಹಲವಾರು ಸಾವಯವ ಮತ್ತು ನೈಸರ್ಗಿಕ ಉತ್ಪನ್ನಗಳು ಲಭ್ಯವಾಗಲಿವೆ.