ಶಿರಸಿ: ಉತ್ತರ ಕನ್ನಡ ಸಾವಯವ ಒಕ್ಕೂಟದ ನೆಲಸಿರಿ ಸಾವಯವ ಉತ್ಪನ್ನಗಳ ಮಾರಾಟ ಮಳಿಗೆ ಉದ್ಘಾಟನೆ ಫೆ.26 ರ ಇಳಿಹೊತ್ತು 4.30 ಕ್ಕೆ ನಡೆಯಲಿದ್ದು, ಹಾಗೂ ಆಲೆ ಸಂಭ್ರಮವನ್ನು ಫೆ.26,27 ರಂದು ಶಿರಸಿಯ ಎ.ಪಿ.ಎಂ.ಸಿ ಯಾರ್ಡ್ ಆವಾರದಲ್ಲಿರುವ ಪಿ.ಎಲ್.ಡಿ ಬ್ಯಾಂಕ್ ಕಟ್ಟಡದ ಮೊದಲನೇ ಮಹಡಿಯಲ್ಲಿನ ಸಂಸ್ಥೆಯ ಕಟ್ಟಡದಲ್ಲಿ ಆಯೋಜಿಸಲಾಗಿದೆ.
ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಎ.ಪಿ.ಎಂ.ಸಿ ಅಧ್ಯಕ್ಷ ಶಿವಕುಮಾರ ದೇಸಾಯಿ ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೆವಿಕೆ ಮುಖ್ಯಸ್ಥರಾದ ಡಾ. ಮಂಜು ಎಂ.ಜೆ., ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಶ್ರೀಪಾದ ರಾಯ್ಸದ್ ಉಪಸ್ಥಿತರಿರುವರು.
ಫೆ.26 ರ ಶನಿವಾರ ಸಂಜೆ 4 ರಿಂದ 8 ಗಂಟೆಯವರೆಗೆ ಹಾಗೂ ಫೆ. 27 ರ ರವಿವಾರ ಬೆಳಿಗ್ಗೆ 10 ರಿಂದ ಸಂಜೆ 8 ರವರಿಗೆ ಆಲೆ ಸಂಭ್ರಮ ನಡೆಯಲಿದ್ದು, ರುಚಿಕರವಾದ ತಾಜಾ ಕಬ್ಬಿನ ಹಾಲು ಹಾಗೂ ವಿವಿಧ ತಿನಿಸುಗಳೊಂದಿಗೆ 2 ದಿನಗಳ ಭರ್ಜರಿ ಮೇಳ ನಡೆಯಲಿದೆ.
ಉತ್ತರ ಕನ್ನಡ ಸಾವಯವ ಒಕ್ಕೂಟದ ಕುರಿತು:
ಕಳೆದ 6 ವರ್ಷಗಳಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾವಯವ ಕೃಷಿ ಉತ್ಪನ್ನಗಳ ಖರೀದಿ, ಮೌಲ್ಯ ವರ್ಧನೆ ಮತ್ತು ಮಾರಾಟದ ಹಾದಿಯಲ್ಲಿ ತನ್ನದೇ ವಿಶಿಷ್ಟವಾದ ಹೆಜ್ಜೆಗುರುತನ್ನು ಮೂಡಿಸಿದ್ದು, ರಾಜ್ಯದಾದ್ಯಂತ ಗ್ರಾಹಕರನ್ನು ಬಹುದೊಡ್ಡ ಪ್ರಮಾಣದಲ್ಲಿ ಹೊಂದಿರುವ ಹೆಮ್ಮೆ ಈ ಸಂಸ್ಥೆಯದು. ಸಾಂಬಾರ ಪದಾರ್ಥಗಳು, ಸಾಂಪ್ರದಾಯಿಕ ತಳಿಯ ಅಕ್ಕಿ, ಜೇನುತುಪ್ಪ, ಕೋಣನಕಟ್ಟೆ ಬೆಲ್ಲ, ಸ್ಕ್ವಾಷ್ ಸೇರಿದಂತೆ ಹಲವಾರು ಸಾವಯವ & ನೈಸರ್ಗಿಕ ಉತ್ಪನ್ನಗಳ ಮೂಲಕ ಗ್ರಾಹಕರ ನಂಬಿಕೆಯನ್ನು ಹೆಚ್ಚಿಸಿದೆ.
ಪ್ರಸ್ತುತ ಉತ್ತರ ಕನ್ನಡ ಸಾವಯವ ಒಕ್ಕೂಟದ ನೇತೃತ್ವದಲ್ಲಿ ಎರಡು ದಿನಗಳ ಈ ಆಲೆ ಸಂಭ್ರಮವನ್ನು ಹಮ್ಮಿಕೊಂಡಿದ್ದು, ಮಾರಾಟ ಮಳಿಗೆಯಲ್ಲಿನ ಉತ್ಪನ್ನಗಳ ಮೇಲೆ ವಿಶೇಷ ರಿಯಾಯಿತಿ ಇರಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಕೋರಿದೆ.