ಶಿರಸಿ: ಉಕ್ರೇನ್ ನಲ್ಲಿ ರಷ್ಯಾ ದಾಳಿಯಿಂದಾಗಿ ಬನವಾಸಿಯ ಹೊಸಪೇಟೆ ರಸ್ತೆ ವಿದ್ಯಾರ್ಥಿಯಾದ ಇಮ್ರಾನ್ ನಜೀರ್ ಚೌದರಿ (21) ವಿನಿಶಿಯಾ ನಗರದಲ್ಲಿ ಸಿಲುಕಿಕೊಂಡಿದ್ದಾನೆ.
ಬನವಾಸಿ ಗ್ರಾಮ ಪಂಚಾಯ್ತಿ ಸದಸ್ಯ ಅಲ್ತಾಫ್ ಚೌಧರಿ ಅವರ ಪುತ್ರನಾಗಿದ್ದಾನೆ. ಈತ ಕಳೆದ ಮೂರು ವರ್ಷಗಳಿಂದ ವಿನಿಶಿಯಾ ನಗರದ ವಿನಿಶಿಯಾ ನ್ಯಾಶನಲ್ ಮೆಮೋರಿಯಲ್ ಪ್ರಿಗೋವ್ ಮೆಡಿಕಲ್ ವಿಶ್ವವಿದ್ಯಾಲಯದಲ್ಲಿ ಎಂ.ಬಿ.ಬಿ.ಎಸ್. ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯಾಗಿದ್ದಾನೆ.
ಉಕ್ರೇನ್ ಪಶ್ಚಿಮ ಮಧ್ಯ ಪ್ರಾಂತ್ಯದ ವಿನಿಶಿಯಾ ನಗರದ ಹಾಸ್ಟೆಲ್‌ನಲ್ಲಿ ಹಲವು ಭಾರತೀಯ ಸ್ನೇಹಿತರೊಂದಿಗೆ ಸುರಕ್ಷಿತವಾಗಿ ಇರುವುದಾಗಿ ಇಮ್ರಾನ್ ತಿಳಿಸಿದ್ದಾರೆ.
‘ಕಟ್ಟಡದಿಂದ ಹೊರಕ್ಕೆ ತೆರಳಲು ಬಿಡುತ್ತಿಲ್ಲ. ನಿನ್ನೆಯೇ ಆಹಾರ ಸಾಮಗ್ರಿಗಳನ್ನು ದಾಸ್ತಾನು ಮಾಡಿಟ್ಟುಕೊಂಡಿದ್ದೇವೆ. ನಗರದಾದ್ಯಂತ ಕರ್ಪ್ಯೂ ವಿಧಿಸಿದ್ದಾರೆ. ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ರಷ್ಯಾ ಸೇನಾಪಡೆಗಳು ಸುತ್ತುವರಿದಿರುವ ದೇಶದ ರಾಜಧಾನಿ ಕೀವ್‌ನಿಂದ 300 ಕಿ.ಮೀ. ದೂರದಲ್ಲಿರುವ ಕಾರಣ ಸದ್ಯಕ್ಕೆ ಸುರಕ್ಷಿತವಾಗಿದ್ದೇವೆ. ಆದರೆ ಹೊರಗಿನ ಸ್ಥಿತಿ ಗೊತ್ತಾಗುತ್ತಿಲ್ಲ. ಪ್ರತಿ ಅರ್ಧ ಗಂಟೆಗೊಮ್ಮೆ ಸೈರನ್ ಸದ್ದು ಕೇಳುತ್ತಿರುವುದು ಭೀತಿ ಸೃಷ್ಟಿಸಿದೆ. ದೊಡ್ಡ ಟ್ರಕ್‌ಗಳ ಓಡಾಟ ಹೆಚ್ಚಿರುವುದು ಆತಂಕ ತಂದಿದೆ. ಭಾರತೀಯ ದೂತಾವಾಸದ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದಾರೆ. ದೇಶಕ್ಕೆ ಮರಳಿ ಕರೆದೊಯ್ಯುವ ಬಗ್ಗೆ ಪ್ರಯತ್ನ ನಡೆಸಲಾಗುತ್ತಿದೆ’ ಎಂದು ಇಮ್ರಾನ್ ಹೇಳಿದ್ದಾರೆ.
‘ಮಗನೊಂದಿಗೆ ದೂರವಾಣಿ ಸಂಪರ್ಕದಲ್ಲಿದ್ದೇವೆ. ಆತ ಸುರಕ್ಷಿತವಾಗಿರುವುದಾಗಿ ತಿಳಿಸಿದ್ದಾನೆ. ಆತನನ್ನು ಶೀಘ್ರ ಭಾರತಕ್ಕೆ ಕರೆತನ್ನಿ ಎಂದು ಸಚಿವ ಶಿವರಾಮ ಹೆಬ್ಬಾರ, ಅಧಿಕಾರಿಗಳಿಗೆ ಮನವಿಯನ್ನೂ ಮಾಡಲಾಗಿದೆ’ ಎಂದು ಇಮ್ರಾನ್ ತಂದೆ ಅಲ್ತಾಫ್ ಚೌಧರಿ ಪ್ರತಿಕ್ರಿಯಿಸಿದ್ದಾರೆ.