ಯಲ್ಲಾಪುರ: ಸೊಪ್ಪಿನ ಬೆಟ್ಟ, ಗೋಮಾಳ ಕುಮ್ಕಿ ಭೂಮಿಯನ್ನು ಸರ್ಕಾರ ಖಾಸಗಿ ಸಂಸ್ಥೆಗಳಿಗೆ ನೀಡಲು ಕ್ಯಾಬಿನೇಟ್ ಉಪಸಮಿತಿ ರಚಿಸಿ ಮಾಡಿರುವ ಆದೇಶಕ್ಕೆ ರೈತಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.
ಪಟ್ಟಣದ ಟಿ.ಎಂ.ಎಸ್ ಸಭಾಭವನದಲ್ಲಿ ಜಿಲ್ಲಾ ಅಡಕೆ ಮತ್ತು ಸಾಂಬಾರು ಬೆಳೆಗಾರರ ಸಂಘ, ಬೆಟ್ಟ ಜಾಗೃತಿ ಅಭಿಯಾನ ಸಮಿತಿ ಆಶ್ರಯದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಸಭೆಯಲ್ಲಿ ವೃಕ್ಷಲಕ್ಷ ಆಂದೋಲನದ ಪ್ರಮುಖ ಅನಂತ ಅಶೀಸರ ಮಾತನಾಡಿ, ರೈತರ ಸೊಪ್ಪಿನ ಬೆಟ್ಟ,ಗೋಮಾಳ, ಹಾಡಿ ಇವೆಲ್ಲ ನೈಸರ್ಗಿಕ ಜೀವ ವೈವಿಧ್ಯವಾಗಿದ್ದು ತೋಟಿಗರು ಅನೇಕ ವರ್ಷಗಳಿಂದ ನಿರ್ವಹಣೆ ಮಾಡಿಕೊಂಡು ಬಂದಿದ್ದಾರೆ. ಕೃಷಿಗೆ ಪೂರಕವಾಗಿದ್ದ ಸೊಪ್ಪಿನ ಬೆಟ್ಟದ ಹಕ್ಕನ್ನು ಕೇಳುತ್ತೇವೆಯೋ ಹೊರತು ಖಾಸಗಿಯವರಿಗೆ ಭೂಮಿ ಕೊಡುವುದಿಲ್ಲ ಎಂದರು.
ಹಿರಿಯರಾದ ನಾರಾಯಣ ಹೆಗಡೆ ಗಡಿಕೈ ಮಾತನಾಡಿ, ಅನಾದಿ ಕಾಲದಿಂದಲೂ ತೋಟದ ಭಾಗವಾಗಿದ್ದ ಸೊಪ್ಪಿನ ಬೆಟ್ಟ ನಮ್ಮ ಹಕ್ಕು. ಸರ್ಕಾರದ ಅಧೀನದಲ್ಲೇ ಇದ್ದರೂ ರೈತರು ಅದನ್ನು ಸರಿಯಾಗಿಟ್ಟುಕೊಂಡು ಬಂದಿದ್ದಾರೆ. ಈಗ ಪ್ರಸ್ತಾಪಿತ ಸರ್ಕಾರದ ನೀತಿ ಸರಿಯಲ್ಲ ಎಂದು ಅಸಮದಾನ ವ್ಯಕ್ತಪಡಿಸಿದರು.
ಟಿ.ಎಂ.ಎಸ್. ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ರೈತ ಸಂಘದ ಅಧ್ಯಕ್ಷ ನಾಗೇಶ ಪಣತಗೇರಿ, ಪ್ರಮುಖರಾದ ವಿ.ಎನ್.ಹೆಗಡೆ ಬೊಮ್ಮನಳ್ಳಿ, ಪಿ.ಜಿ.ಭಟ್ಟ ಬರಗದ್ದೆ, ಗಜಾನನ ಜಡ್ಡಿ, ಉಮೇಶ ಭಾಗ್ವತ, ಸುಬ್ಬಣ್ಣ ಬೋಳ್ಮನೆ, ನಾರಾಯಣ ಅಡ್ಕೆಪಾಲ್, ವಿ.ಎನ್.ಗೇರಗದ್ದೆ, ಎಲ್.ಪಿ.ಭಟ್ಟ ಗುಂಡ್ಕಲ್, ಕೆ.ಜಿ.ಬೋಡೆ, ಜಿ.ಎಸ್.ಭಟ್ಟ ಕಾರೆಮನೆ, ಗೋಪಾಲಕೃಷ್ಣ ಕೈಶೆಟ್ಟಿಮನೆ, ನರಸಿಂಹ ಸಾತೊಡ್ಡಿ, ಬಿ.ಜಿ.ಹೆಗಡೆ ಗೇರಾಳ, ಟಿ.ಆರ್.ಹೆಗಡೆ ತೊಂಡೆಕರೆ ಇತರರಿದ್ದರು.