ಅಂಕೋಲಾ: ಮೀನುಗಾರರ ಮುಖಂಡ ಹಾಗೂ ಮೀನುಗಾರ ಸಹಕಾರಿ ಸಂಘ ಹಿಲ್ಲೂರು ಸಂಸ್ಥಾಪಕ ಅಧ್ಯಕ್ಷ ಹರಿಹರ ವಿ. ಹರಿಕಾಂತ ಹಿಲ್ಲೂರು ಇವರು ಜಂಟಿ ನಿರ್ದೇಶಕರು ಮೀನುಗಾರಿಕಾ ಇಲಾಖೆ ಕಾರವಾರ ಇವರಿಗೆ ಲಿಖಿತ ಮನವಿ ನೀಡಿ ಮೀನುಗಾರರ ಸಹಕಾರಿ ಸಂಘಗಳ ಸದಸ್ಯರ ಕೇಂದ್ರ ಪುರಸ್ಕ್ರತ ಸಹಾಯಧನವನ್ನು ಶೀಘ್ರ ಬಿಡುಗಡೆಗೊಳಿಸುವಂತೆ ಕೋರಿದ್ದಾರೆ.
ಮನವಿಯಲ್ಲಿ ಅವರು ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರದ ಉಳಿತಾಯ ಮತ್ತು ಪರಿಹಾರ ಯೋಜನೆಯ ಸುಮಾರು 2015-16 ರಿಂದ 2017-18 ರ ಬಾಕಿ ಫಲಾನುಭವಿಗಳ ಸಹಾಯಧನ ಹಾಗೂ 2018-19 ರಿಂದ 2019-20 ರವರೆಗಿನ ಪೂರ್ಣ ಪ್ರಮಾಣದ ಸಹಾಯಧನ ಇದುವರೆಗೂ ಬಿಡುಗಡೆಯಾಗಿಲ್ಲ. ಇದರಿಂದ ಫಲಾನುಭವಿಗಳು ಸದರಿ ಯೋಜನೆ ಮರುನೋಂದಣಿಗೆ ಹಿಂದೇಟು ಹಾಕುತ್ತಿದ್ದಾರೆ. ಹಲವು ಭಾರಿ ಸಂಘದ ಸದಸ್ಯರಿಗೆ ತಿಳುವಳಿಕೆ ನೀಡಲಾಗಿದೆಯಾದರೂ ಅತಿಯಾದ ವಿಳಂಬದಿಂದ ಸಹಕಾರಿ ಸಂಘಗಳ ವಿರುದ್ಧ ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ.
ಇದು ಕೇವಲ ನಮ್ಮ ಸಹಕಾರಿ ಸಂಘಕ್ಕೆ ಮಾತ್ರವಲ್ಲದೇ ಜಿಲ್ಲೆಯ ಹಲವಾರು ಸಂಘಗಳಿಗೂ ಕೂಡ ಇದು ಅನ್ವಯಿಸಿದ್ದು, ಮುಂದಿನ ದಿನಗಳಲ್ಲಿ ಇದೇ ರೀತಿ ವಿಳಂಬವಾದಲ್ಲಿ ಸದರಿ ಯೋಜನೆಯು ವಿಫಲವಾಗುವ ಸೂಚನೆಗಳು ಗೋಚರವಾಗುತ್ತಿದೆ. ಕಾರಣ ದಯಾಳುಗಳಾದ ತಾವು ತಕ್ಷಣ ಬಾಕಿ ಅನುದಾನ ಹಾಗೂ ಪೂರ್ಣ ಪ್ರಮಾಣದ ಸಹಾಯಧನ ಬಿಡುಗಡೆಗೊಳಿಸುವಂತೆ ಸೂಕ್ತ ಕ್ರಮವಹಿಸಬೇಕೆಂದು ಲಿಖಿತ ಮನವಿಯಲ್ಲಿ ಅವರು ಆಗ್ರಹಿಸಿದ್ದಾರೆ.