ಶಿರಸಿ: ಅಡಿಕೆ ಕೊಯ್ಲಿನಲ್ಲಿ ರೈತರು ಕೊನೆ ಕೊಯ್ಯುವ ಕೆಲಸಗಾರರ ಕೊರತೆಯಿಂದ ಅನುಭವಿಸುತ್ತಿರುವ ಬವಣೆಯ ಕುರಿತು ಈ ಬಾರಿಯ ಅಧಿವೇಶನದಲ್ಲಿ ಸರ್ಕಾರದ ಗಮನಕ್ಕೆ ತಂದು, ಸಾಂಪ್ರದಾಯಿಕ ಕೊನೆ ಕೊಯ್ಯುವ ವ್ಯವಸ್ಥೆಗೆ ಪರ್ಯಾಯವಾಗಿ ಪ್ರಚಲಿತಕ್ಕೆ ಬಂದಿರುವ ಕಾರ್ಬನ್ ಫೈಬರ್ ದೋಟಿಯ ಬೆಲೆ ಸಾಮಾನ್ಯ ರೈತರಿಗೆ ಎಟುಕದಿರುವುದರಿಂದ ಸರ್ಕಾರ ಅಡಿಕೆ ಕೊನೆ ಕೊಯ್ಯುವ ಕಾರ್ಬನ್ ಫೈಬರ್ ಉಪಕರಣವನ್ನು ತೋಟಗಾರಿಕಾ ಇಲಾಖೆಯ ಸಬ್ಸಿಡಿ ಉಪಕರಣಗಳ ಪಟ್ಟಿಗೆ ಸೇರ್ಪಡೆಗೊಳಿಸಿ ರೈತರಿಗೆ ಅನುಕೂಲ ಕಲ್ಪಿಸಲು ತೋಟಗಾರಿಕಾ ಸಚಿವರಾದ ಮುನಿರತ್ನ’ಗೆ ಸೂಚಿಸಲಾಗಿತ್ತು.
ಈ ಬಗ್ಗೆ ತೋಟಗಾರಿಕಾ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಕಾರ್ಬನ್ ಫೈಬರ್ ದೋಟಿಯನ್ನು ಇಲಾಖೆಯ ಸಬ್ಸಿಡಿ ಉಪಕರಣಗಳ ಪಟ್ಟಿಗೆ ಸೇರ್ಪಡೆಗೊಳಿಸಿದ್ದು, ಮುಂದಿನ ದಿನಗಳಲ್ಲಿ ಕಾರ್ಬನ್ ಫೈಬರ್ ದೋಟಿಯು ರೈತರಿಗೆ ಸಬ್ಸಿಡಿ ದರದಲ್ಲಿ ಲಭ್ಯವಿರಲಿರುವುದಾಗಿ ತಿಳಿಸಿದ್ದಾರೆ. ಈ ಮೂಲಕ ತಕ್ಷಣ ಸ್ಪಂದಿಸಿದ ತೋಟಗಾರಿಕಾ ಸಚಿವರಿಗೆ ಅಡಿಕೆ ಬೆಳೆಗಾರರ ಪರವಾಗಿ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಧನ್ಯವಾದ ತಿಳಿಸಿದ್ದಾರೆ.