ಕಾರವಾರ: ಕದ್ರಾ ಆಣೆಕಟ್ಟಿಗಾಗಿ ಜಮೀನು, ಮನೆ ಕಳೆದುಕೊಂಡು ಹಲವಾರು ವರ್ಷಗಳಿಂದ ತಾತ್ಕಾಲಿಕ ಸೆಡ್‌ನಲ್ಲಿ ವಾಸಿಸುತ್ತಿರುವ 60 ಕ್ಕೂ ಅಧಿಕ ನಿರಾಶ್ರಿತ ಕುಟುಂಬಗಳಿಗೆ ಖಾಯಂ ಪುನರ್ವಸತಿ ಕಲ್ಪಿಸಿಕೊಡುವಂತೆ ಒತ್ತಾಯಿಸಿ, ಗ್ರಾಪಂ ಕದ್ರಾ ನಿಯೋಗವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮನವಿ ಸಲ್ಲಿಸಿದೆ.
ಕದ್ರಾ ಅಣೆಕಟ್ಟಿಗಾಗಿ ಜಮೀನು ಮತ್ತು ಮನೆ ಕಳೆದುಕೊಂಡು ನಿರಾಶ್ರಿತರಾದವರಿಗೆ ಕರ್ನಾಟಕ ವಿದ್ಯುತ್ ನಿಗಮ ನಿಯಮಿತವು ಆಣೆಕಟ್ಟಿನ ಕೆಳಭಾಗದ ಅರಣ್ಯ ಜಮೀನಿನಲ್ಲಿ ಈ ಹಿಂದೆ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿಕೊಟ್ಟಿದ್ದು, ಈವರೆಗೂ ನಿರಾಶ್ರಿತರಿಗೆ ಸಂಬಂಧಿಸಿದ ರಿಕಾರ್ಡ್ ಉತ್ತಾರ ಅಥವಾ ಪಟ್ಟಾ ನೀಡಿಲ್ಲ. ಅಲ್ಲದೇ, ನಿರಾಶ್ರಿತ ಕುಟುಂಬದ ಸದಸ್ಯರಿಗೆ ಯಾವುದೇ ನೌಕರಿಯನ್ನೂ ನೀಡಿಲ್ಲ. ಇದರಿಂದ ಸುಮಾರು 60 ಕುಟುಂಬಗಳು ತಾತ್ಕಾಲಿಕ ಶೆಡ್‌ನಲ್ಲಿಯೇ ಕಷ್ಟ ಅನುಭವಿಸುವಂತಾಗಿದೆ.
ಇನ್ನು, ಕದ್ರಾ ಆಕೆಕಟ್ಟಿನಿಂದ ಬಿಡಲಾಗುವ ಹೆಚ್ಚುವರಿ ನೀರಿನಿಂದ ಈ ನಿರಾಶ್ರಿತರ ಮನೆಗಳು ಜಲಾವೃತ್ತಗೊಳ್ಳುತ್ತಿದ್ದು, ಜೀವದ ಭೀತಿ ಎದುರಾಗಿದೆ. ಜಲಾಶಯದ ನೀರು ಸುತ್ತುವರೆದಾಗ ಜೀವ ಉಳಿಸಿಕೊಳ್ಳಲು ಓಡಿ ಹೋಗಲೂ ಸಹ ಬೇರೆ ದಾರಿ ಇಲ್ಲದೇ ಅತಂತ್ರರಾಗಿದ್ದಾರೆ. ಆದ್ದರಿಂದ ನಿರಾಶ್ರಿತರಿಗೆ ಖಾಯಂ ಪುನರ್ವಸತಿ ಕಲ್ಪಿಸಿಕೊಟ್ಟು, ಜಾಗದ ರಿಕಾರ್ಡ್ ಉತ್ತಾರ ಅಥವಾ ಪಟ್ಟಾ ಸಿಗುವಂತೆ ಮಾಡಿಕೊಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.