ಶಿರಸಿ: ನಾಡಿನಾದ್ಯಂತ ಪ್ರಸಿದ್ಧವಾಗಿರುವ ಶಿರಸಿಯ ಶ್ರೀ ಮಾರಿಕಾಂಬಾ ಜಾತ್ರೆ ಸಮೀಪಿಸುತ್ತಿದೆ. ಭಕ್ತಿ-ಶಕ್ತಿಯ ಸಂಕೇತವಾಗಿರುವ ಈ ಜಾತ್ರೆಗೆ ಹೊರರಾಜ್ಯಗಳಿಂದ ಭಕ್ತಾದಿಗಳು ಆಗಮಿಸುತ್ತಾರೆ. ಭಕ್ತಿಭಾವದಲ್ಲಿ ಪುನೀತರಾಗುತ್ತಾರೆ, ಅಲ್ಲದೆ ಹೊರ ರಾಜ್ಯಗಳಿಂದಲೂ ವ್ಯಾಪಾರಸ್ಥರು ಆಗಮಿಸುತ್ತಾರೆ, ಇಲ್ಲಿನ ಸ್ಥಳೀಯರು ಜಾಗೆಯ ಹರಾಜಿನಲ್ಲಿ ಭಾಗವಹಿಸಿ ಖರೀದಿಸಿ ಅಲ್ಲಿ ಅಂಗಡಿ ತೆರೆದು ವ್ಯಾಪಾರ-ವಹಿವಾಟು ನಡೆಸುತ್ತಾರೆ. ಲಕ್ಷಗಟ್ಟಲೆ ಹಣವನ್ನು ತೆತ್ತು ಜಾಗವನ್ನು ಹರಾಜಿನಲ್ಲಿ ಮಾರಾಟ ಮಾಡಲಾಗುತ್ತದೆ.
ಆದರೆ ವಿಪರ್ಯಾಸ-ವಿಷಾದನೀಯವೆಂಬಂತೆ ಕೆಲವು ಅಸಲಿ ವ್ಯಾಪಾರಸ್ಥರಲ್ಲದ ಮಧ್ಯವರ್ತಿಗಳು ಈ ಜಾಗಗಳ ಹರಾಜಿನಲ್ಲಿ ಭಾಗವಹಿಸಿ ಖರೀದಿಸಿ ಅವುಗಳನ್ನು ಬೇರೆ ವ್ಯಾಪಾರಸ್ಥರಿಗೆ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಾರೆ. ಅಥವಾ ದುಪ್ಪಟ್ಟು ಬಾಡಿಗೆಯನ್ನು ಪೀಕುತ್ತಾರೆ. ಪ್ರತಿ ಬಾರಿಯ ಜಾತ್ರೆಯಲ್ಲೂ ಈ ಅಕ್ರಮ ವ್ಯವಹಾರ ನಡೆಯುತ್ತಿದ್ದು, ನಿಜವಾದ ಬಡ ವ್ಯಾಪಾರಿಗಳು ಜಾತ್ರೆಯ ವ್ಯಾಪಾರದಿಂದ ವಂಚಿತರಾಗುವಂತಾಗಿದೆ.
ಹೋದ ಬಾರಿಯ ಜಾತ್ರೆಯಲ್ಲಿ ಕರೋನಾ ದುರ್ವಿಧಿಯಿಂದ ಕೊನೆಯ ಘಳಿಗೆಯಲ್ಲಿ ಎಲ್ಲ ಅಂಗಡಿಗಳನ್ನು ತೆರವುಗೊಳಿಸಲಾಯಿತು. ಅನೇಕ ಅಂಗಡಿಕಾರರು ಲಾಭವಿಲ್ಲದೆ ನಷ್ಟ-ಕಷ್ಟದಲ್ಲಿ ಕಣ್ಣೀರು ಚೆಲ್ಲುತ್ತ ಇದ್ದದ್ದನ್ನು ಕೇಳಿದ ಬೆಲೆಗೆ ಮಾರಿಕೊಂಡು ಮರಳಿ ಹೋಗಬೇಕಾಯಿತು. ಇಂಥ ದುಷ್ಟ ಮಧ್ಯವರ್ತಿಗಳಿಂದ ಇವರು ಇನ್ನಷ್ಟು ಕಂಗಾಲಾಗುವಂತಾಯಿತು.
ಆದ್ದರಿಂದ ತಾವು ಜಾತ್ರೆಯ ಹರಾಜಿನಲ್ಲಿ ಗಮನಹರಿಸಿ ಮಧ್ಯವರ್ತಿಗಳಿಗೆ ಅಕ್ರಮಕ್ಕೆ ಕಡಿವಾಣ ಹಾಕಿ ಸುಗಮ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಬೇಕೆಂದು ಮತ್ತು ಸಂಬಂಧಪಟ್ಟ ಅಧಿಕಾರಿಗಳು / ಅಡಳಿತ ವ್ಯವಸ್ಥೆ ಈ ಬಗ್ಗೆ ಗಮನಹರಿಸಬೇಕೇಂದು ಈ ಮೂಲಕ ಆಗ್ರಹಿಸುತ್ತೇನೆ ಎಂದು ಕೃಷ್ಣ ಎಚ್ ಬಳಿಗಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.