ನವದೆಹಲಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಮಕ್ಕಳಿಗಾಗಿ ಪಿಎಂ ಕೇರ್ ಯೋಜನೆಯನ್ನು ಫೆ. 28 ರವರೆಗೆ ವಿಸ್ತರಿಸಿದೆ. ಈ ಮೊದಲು ಈ ಯೋಜನೆಯು 2021 ಡಿ. 31 ರವರೆಗೆ ಮಾನ್ಯವಾಗಿತ್ತು.
ಈ ಸಂಬಂಧ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಎಲ್ಲಾ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಗೆ, ಎಲ್ಲಾ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳಿಗೆ ಅಗತ್ಯ ಕ್ರಮಕ್ಕಾಗಿ ಪತ್ರವನ್ನು ಪ್ರತಿಯೊಂದಿಗೆ ಕಳುಹಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಮಕ್ಕಳಿಗಾಗಿ ಪಿಎಂ ಕೇರ್ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಎಲ್ಲಾ ಅರ್ಹ ಮಕ್ಕಳನ್ನು ಈಗ ಫೆ. 28 ರವರೆಗೆ ನೋಂದಾಯಿಸಿಕೊಳ್ಳಬಹುದು.
ಮಾರ್ಚ್ 11, 2020 ರಿಂದ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ತಂದೆ-ತಾಯಿ, ಪೋಷಕರು, ಕಾನೂನು ಪಾಲಕರು, ದತ್ತು ಪಡೆದ ಪೋಷಕರನ್ನು ಕಳೆದುಕೊಂಡಿರುವ ಎಲ್ಲಾ ಮಕ್ಕಳನ್ನು ಈ ಯೋಜನೆಯು ಒಳಗೊಂಡಿದೆ.ಈ ಯೋಜನೆಯಡಿ ಪ್ರಯೋಜನಗಳನ್ನು ಪಡೆಯಲು ಅರ್ಹತೆ ಹೊಂದಲು, ಪೋಷಕರು ಮರಣಹೊಂದಿದ ದಿನಾಂಕದಂದು ಮಗುವಿಗೆ 18 ವರ್ಷ ವಯಸ್ಸು ಪೂರ್ಣಗೊಂಡಿರಬಾರದು.
ಕೋವಿಡ್ ಸಾಂಕ್ರಾಮಿಕ ರೋಗದಿಂದ ತಮ್ಮ ಪೋಷಕರನ್ನು ಕಳೆದುಕೊಂಡ ಮಕ್ಕಳ ಸಮಗ್ರ ಆರೈಕೆ ಮತ್ತು ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು, ಆರೋಗ್ಯ ವಿಮೆಯ ಮೂಲಕ ಅವರ ಯೋಗಕ್ಷೇಮವನ್ನು ಸಕ್ರಿಯಗೊಳಿಸಲು, ಶಿಕ್ಷಣದ ಮೂಲಕ ಅವರನ್ನು ಸಬಲೀಕರಣಗೊಳಿಸಲು ಮತ್ತು ಸ್ವಾವಲಂಬಿಗೊಳಿಸಲು ಈ ಯೋಜನೆಯನ್ನು ಘೋಷಿಸಲಾಗಿದೆ.