ಮುಂಡಗೋಡ: ಕೆಂಪು ಕೋಟೆಯ ಮೇಲೆ ಕೇಸರಿ ಧ್ವಜವನ್ನು ಹಾರಿಸುತ್ತೇವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಕೂಡಲೇ ಸಚಿವ ಸಂಪುಟದಿಂದ ಕೈಬಿಡುವಂತೆ ಒತ್ತಾಯಿಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಕಚೇರಿಯಿಂದ ಪ್ರತಿಭಟನೆ ಆರಂಭಿಸಿ ಸಚಿವ ಈಶ್ವರಪ್ಪ ವಿರುದ್ದ ಘೋಷಣೆಗಳನ್ನು ಕೂಗುತ್ತಾ, ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಅರ್ಪಿಸಿದರು.
ರಾಜ್ಯ ಸರ್ಕಾರದ ಸಚಿವರಾಗಿರುವ ಕೆ.ಎಸ್.ಈಶ್ವರಪ್ಪ ಅವರು, ಇತ್ತೀಚೆಗೆ ತ್ರಿವಣ್ ಧ್ವಜದ ಸ್ಥಾನದಲ್ಲಿ ಕೇಸರಿ ಧ್ವಜವನ್ನು ಹಾರಿಸುವ ಹೇಳಿಕೆ ಕೊಟ್ಟಿದ್ದಾರೆ. ಇದು ಅತ್ಯಂತ ಅಪಾಯಕಾರಿ. ದೇಶದ್ರೋಹದ ಹೇಳಿಕೆಯಾಗಿದೆ. ತ್ರಿವರ್ಣ ಧ್ವಜವನ್ನು ನಮ್ಮ ರಾಷ್ಟ್ರದ ಅಖಂಡತೆ, ಸಾರ್ವಭೌಮತೆಗೆ ಹಾಗೂ ಸಂವಿಧಾನಗಳ ಸಂಕೇತವಾಗಿದೆ. ಹೀಗಾಗಿ ಅವರ ಹೇಳಿಕೆಯಿಂದ ದೇಶದ ಪ್ರಜೆಗಳಿಗೆ ದಿಗ್ಭ್ರಮೆಯಾಗಿದೆ. ಕೂಡಲೇ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟು ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ, ರಾಷ್ಟ್ರದ ಗೌರವವನ್ನು ಎತ್ತಿ ಹಿಡಿಯುವಂತೆ ಒತ್ತಾಯಿಸಿ ಈಗಾಗಲೇ ಕಾಂಗ್ರೆಸ್ ಪಕ್ಷದ ಶಾಸಕರು ವಿಧಾನಸೌಧದಲ್ಲಿ ಹಗಲು ರಾತ್ರಿ ಧರಣಿಮಾಡುತ್ತಿದ್ದಾರೆ. ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ರಾಜ್ಯದ ಸಚಿವರಾಗಿರುವುದನ್ನು ನಾವೆಲ್ಲ ಖಂಡಿಸುತ್ತೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಪ್ರತಿಭಟನಾ ಮೆರವಣಿಗೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪಾಟೀಲ, ರಾಮಕೃಷ್ಣ ಮೂಲಮನಿ, ಶಾರದಾ ರಾಠೋಡ, ಗೋಪಾಲ ಪಾಟೀಲ, ಪಿ.ಜಿ.ತಂಗಚ್ಚನ್, ಬಸವರಾಜ ನಡುವಿನಮನಿ, ನಾಗರಾಜ ಹಂಚಿನಮನಿ, ರಜಾಖಾನ ಪಠಾಣ, ನಿತಿನ ರಾಯ್ಕರ, ನಾಗರಾಜ ತಿಮ್ಮಾಪುರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.