ಮುಂಡಗೋಡ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಈಗ ರಾಜ್ಯ ಕಮೀಟಿಗೂ ತಲುಪಿದ್ದು, 25 ಕ್ಕೂ ಹೆಚ್ಚು ಮುಖಂಡರು, ಈ ಹಿಂದೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಕೃಷ್ಣ ಹಿರೇಹಳ್ಳಿ ಅವರನ್ನೆ ಮುಂದುವರೆಸುವಂತೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಈ ಹಿಂದೆ ಯಲ್ಲಾಪುರ ಕ್ಷೇತ್ರದ ಶಾಸಕರಾಗಿದ್ದ ಶಿವರಾಮ ಹೆಬ್ಬಾರ್ ಅವರು ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಸೇರ್ಪಡೆಗೊಂಡಿದ್ದರಿಂದ, ಬಹಳಷ್ಟು ಜನರನ್ನು ತಮ್ಮ ಜೊತೆ ಕರೆದುಕೊಂಡು ಹೋಗಿದ್ದರು. ಇದರಿಂದ ಕಾಂಗ್ರೆಸ್ ಪಕ್ಷದಲ್ಲಿ ಬೆರಳೆಣಿಕೆಯಷ್ಟು ಕಾರ್ಯಕರ್ತರು ಉಳಿದಿದ್ದರು. ಅಂತಹ ಸಮಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಧೈರ್ಯ ತುಂಬಿ, ಪಕ್ಷ ಸಂಘಟಿಸಿದ್ದಾರೆ. ಬೂತ ಸಮೀತಿಯ ಅಧ್ಯಕ್ಷರು ಮಾಡುವ ವೇಳೆಯಲ್ಲಿ ಯಾರೂ ಮುಂದೆ ಬರದಿದ್ದಾಗ ನಿನ್ನ ಹಿಂದೆ ನಾವಿದ್ದೇವೆ ಎಂದು ಧೈರ್ಯ ತುಂಬಿ ಬೂತಮಟ್ಟದ ಸಮಿತಿಗಳನ್ನು ರಚಿಸಿ, ಪಕ್ಷ ಸಂಘಟನೆ ಮಾಡಿ ಕಳೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಅವರಿಗೆ 52ಸಾವಿರ ಮತಗಳನ್ನು ಯಲ್ಲಾಪುರ ಕ್ಷೇತ್ರದಲ್ಲಿ ಪಡೆದುಕೊಂಡಿದ್ದಾರೆ.
ನಂತರ ನಡೆದ ಗ್ರಾ.ಪಂ ಚುನಾವಣೆಯಲ್ಲಿ ಯಲ್ಲಾಪುರ ಕ್ಷೇತ್ರಕ್ಕೆ ಉಸ್ತುವಾರಿ ನೇಮಿಸಿದ ಸಂತೋಷ ಲಾಡ ಅವರು ತಾಲೂಕಿನಾದ್ಯಂತ ಪ್ರಚಾರ ನಡೆಸಿ 16 ಗ್ರಾಮ ಪಂಚಾಯತಗಳಲ್ಲಿ 7 ಗ್ರಾ.ಪಂ ಗಳಲ್ಲಿ ಸ್ಪಷ್ಟ ಬಹುಮತ ಪಡೆದುಕೊಂಡಿದ್ದೇವೆ. ಸಂತೋಷ ಲಾಡ ಅವರು ಯಲ್ಲಾಪುರ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆಯಾಗುವ ಆಸೆ ಚಿಗುರುಕೊಂಡಿತ್ತು. ಈ ವಿಷಯ ನಾಯಕರಿಗೆ ಗೊತ್ತಾಗುತ್ತಿದ್ದಂತೆ ಈ ಕ್ಷೇತ್ರದಿಂದ ಅವರನ್ನು ದೂರ ಸರಿಸಿ ಪ್ರಶಾಂತ ದೇಶಪಾಂಡೆ ಅವರು ಯಾವುದೇ ಮುನ್ಸೂಚನೆ ನೀಡದೇ, ನಾನು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಆಗಿದ್ದೇನೆ ಎಂದು ಮುಂದಿನ ವಿಧಾನಸಭಾ ಅಭ್ಯರ್ಥಿ ಎಂದು ಬಿಂಬಿಸಿಕೊಂಡು ಪಕ್ಷದ ಸಂಘಟನೆಗೆ ಮಾರಕರಾಗಿದ್ದಾರೆ.
ಮುಂಡಗೋಡ ಅಧ್ಯಕ್ಷರ ಬದಲಾವಣೆ:
ಜ.24ರಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ ಅವರನ್ನು ಪ್ರಶಾಂತ ದೇಶಪಾಂಡೆ ಕರೆಸಿ ನೀನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡು. ಅಧ್ಯಕ್ಷರ ಬದಲಾವಣೆ ಮಾಡುತ್ತೇನೆ. ಇದನ್ನು ಯಾರಿಗೂ ತಿಳೀಸಬೇಡ ಎಂದು ಏಕಾಏಕಿ ಏರು ಧ್ವನಿಯಲ್ಲಿ ಹೇಳಿದರು. ಈ ಮಾತನ್ನು ಕೇಳಿದ ಕೃಷ್ಣ ಹಿರೇಹಳ್ಳಿ ಅವರು ನಗಲು ಆರಂಭೀಸಿದರು. ಇಲ್ಲ ಕೃಷ್ಣ ನಾನು ಸರಿಯಾಗಿ ಹೇಳುತ್ತಿದ್ದೇನೆ. ನಿನಗೆ ದಿನದ 24ಗಂಟೆ ವಾರದಲ್ಲಿ ಏಳು ದಿನ ಕೆಲಸ ಮಾಡಲು ಸಾಧ್ಯವಿಲ್ಲ. ನೀನು ರಾಜೀನಾಮೆ ಕೊಡು ಎಂದು ಗದರಿಸಿ ಹೇಳುತ್ತಾರೆ. ಆ ವೇಳೆಯಲ್ಲಿ ಕೃಷ್ಣ ಹಿರೇಹಳ್ಳಿ ಕಾರ್ಯಕರ್ತರ ಹಾಗೂ ಹಿರಿಯರ ಅಭಿಪ್ರಾಯ ಕೇಳಿ ಅವರು ಒಪ್ಪಿದರೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿ ಅಲ್ಲಿಂದ ಎದ್ದು ಬರುತ್ತಾರೆ. ನಂತರ, ಮುಖಂಡರ ಹಾಗೂ ಕಾರ್ಯಕರ್ತರ ಸಭೆ ನಡೆಸಿ ರಾಜೀನಾಮೆ ವಿಷಯ ತಿಳಿಸಿದಾಗ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡದಂತೆ ಎಲ್ಲರೂ ಒಕ್ಕೊರಲಿನಿಂದ ನಿರ್ಣಯಿಸಿದ್ದಾರೆ.
ಈ ಘಟನೆ ನಡೆದ 2-3 ದಿನದಲ್ಲಿಯೇ ಅಧ್ಯಕ್ಷರ ಬದಲಾಯಿಸಲಾಗಿದೆ ಎಂದು ಆದೇಶ ಹೊರಡಿಸುತ್ತಾರೆ. ಅದು ಮೂರು ತಿಂಗಳ ಹಿಂದೆಯೇ ಮಾಡಿದ ಆದೇಶವಾಗಿದೆ. ಆದರೆ, ಮೂರುವರೆ ತಿಂಗಳ ಮುಂಚೆ ಆದೇಶ ತಂದು ಇಲ್ಲಿಯವರೆಗೆ ಮುಚ್ಚಿಡಲು ಕಾರಣವೇನು? ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆಯೇ? ಪಕ್ಷ ಹೀನಾಯ ಸ್ಥಿತಿಯಲ್ಲಿರುವಾಗ ಕಷ್ಟದ ಕಾಲದಲ್ಲಿ ಪಕ್ಷ ಕಟ್ಟಿದಂತ ನಾಯಕರಿಗೆ ಏಕಾಏಕಿ ಈ ಉಡುಗೊರೆಯೇ? ಅಧ್ಯಕ್ಷರ ಬದಲಾವಣೆ ತೀರ್ಮಾನ ಮಾಡಬೇಕಾದರೆ ಎಲ್ಲ ಹಿರಿಯ ಮುಖಂಡರ ಅಭಿಪ್ರಾಯ ಪಡೆದುಕೊಳ್ಳುವುದು ನಾಯಕನಾದವನ ಕರ್ತವ್ಯ. ಆದರೆ ಇಲ್ಲಿ ಯಾವುದೇ ವಿಷಯವನ್ನು ಚರ್ಚಿಸದೇ ದಿಡೀರನೆ ಇಂತಹ ತೀರ್ಮಾನ ತೆಗೆದುಕೊಂಡಿರುವುದು ಸರಿಯೇ? ಕಾಂಗ್ರೆಸ್ ಪಕ್ಷ ಒಬ್ಬರ ಸ್ವತ್ತೇ? ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಚರ್ಚಿಸದೆ ಸರ್ವಾಧಿಕಾರಿ ಧೋರಣೆ ತೆಗೆದುಕೊಂಡಿದ್ದು ತಾಲೂಕಿನ ಕಾಂಗ್ರೆಸ್ ಮುಖಂಡರಿಗೆ ಅವಮಾನಿಸಿದಂತಾಗಿದೆ.
ಕಾರ್ಯಕರ್ತರು ಸಹ ಇದೇನು ಸರ್ವಾಧಿಕಾರಿಯ ತೀರ್ಮಾನವೇ? ಎಂದು ಪ್ರಶ್ನಿಸುತ್ತಿದ್ದಾರೆ. ಕೃಷ್ಣ ಹಿರೆಹಳ್ಳಿ ಅವರು ಕಷ್ಟದ ಕಾಲದಲ್ಲಿ ಪಕ್ಷದ ಜೊತೆಗೆ ನಿಂತುಕೊಂಡು, ಪಕ್ಷವನ್ನು ಸಂಘಟಿಸಿ, ತನುಮನಧನದಿಂದ ಕಾರ್ಯಕರ್ತರ ಸಮಸ್ಯೆಗಳನ್ನು ಆಲಿಸಿದ್ದಾರೆ. ಸಾವಿರಾರು ಕಾರ್ಯಕರ್ತರು ಅವರ ಬೆನ್ನ ಹಿಂದೆ ನಿಂತಿದ್ದಾರೆ. ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷ ಉಳಿಸಲು ಕೃಷ್ಣ ಹಿರೇಹಳ್ಳಿ ಅವರನ್ನು ಅಧ್ಯಕ್ಷರನ್ನಾಗಿ ಮುಂದುವರೆಸುವಂತೆ ಮನವಿಯಲ್ಲಿ ತಿಳಿಸಲಾಗಿದೆ.
ಜಿಲ್ಲಾಧ್ಯಕ್ಷರಿಂದಲೂ ಕೃಷ್ಣ ಹಿರೇಹಳ್ಳಿ ಅವರನ್ನು ಮುಂದುವರೆಸುವಂತೆ ಕೆಪಿಸಿಸಿಗೆ ಪತ್ರ:-
ಕಷ್ಟದ ಕಾಲದಲ್ಲಿ ಪಕ್ಷವನ್ನು ಸಂಘಟಿಸಿದ ಕೃಷ್ಣ ಹಿರೇಹಳ್ಳಿ ಅವರನ್ನು ನಮ್ಮ ಗಮನಕ್ಕೂ ತರದೇ ಏಕಾಏಕಿಯಾಗಿ ಬದಲಾವಣೆ ಮಾಡಲಾಗಿದೆ. ಕೃಷ್ಣ ಹಿರೇಹಳ್ಳಿ ಅವರನ್ನೇ ಮುಂದುವರೆಸುವಂತೆ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಪತ್ರ ನೀಡಿದ್ದಾರೆ ಎಂದು ಕಾಂಗ್ರೆಸ್ ಮೂಲಗಳಿಂದ ತಿಳಿದುಬಂದಿದೆ.
ಕೆಪಿಸಿಸಿ ಅಧ್ಯಕ್ಷರ ಭರವಸೆ:-ಮುಂಡಗೋಡ ಹಾಗೂ ಯಲ್ಲಾಪುರ ತಾಲೂಕು ಕಾಂಗ್ರೆಸ್ ಪಕ್ಷದ ಅಧ್ಯಕ್ಷರನ್ನು ಬದಲಾವಣೆ ಮಾಡುವಂತೆ ಆರ್.ವಿ.ದೇಶಪಾಂಡೆ ಹೇಳಿದ್ದರಿಂದ ಬದಲಾವಣೆ ಮಾಡಿದ್ದೇನೆ. ಕೂಡಲೇ ಹಿಂದಿನವರನ್ನೇ ಮತ್ತೆ ಮುಂದುರೆಸುವ ಭರವಸೆ ನೀಡಿದ್ದಾರೆ ಎಂದು ಬೆಂಗಳೂರಿಗೆ ಹೋಗಿರುವ ನಿಯೋಗದ ಮುಖಂಡರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮುಂಡಗೋಡ ತಾಲೂಕಿನ 16 ಘಟಕದ ಅಧ್ಯಕ್ಷರು, 7 ಗ್ರಾ.ಪಂ.ಅಧ್ಯಕ್ಷರು, 8ಉಪಾಧ್ಯಕ್ಷರು, 25 ವಿವಿಧ ಸೆಲ್ ಗಳ ಪ್ರಮುಖ ಮುಖಂಡರು ಈ ಮನವಿ ಪತ್ರಕ್ಕೆ ಸಹಿ ಮಾಡಿದ್ದಾರೆ. ಈ ನಿಯೋಗದಲ್ಲಿ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಕಾಂಗ್ರೆಸ್ ಮುಖಂಡ ಎಚ್.ಎಂ.ನಾಯ್ಕ, ಧರ್ಮರಾಜ ನಡಿಗೇರಿ, ದರ್ಗಾವಾಲೆ, ಮಲ್ಲು ಗೌಳಿ ಸೇರಿದಂತೆ 25ಕ್ಕೂ ಹೆಚ್ಚು ಮುಖಂಡರು ನಿಯೋಗದಲ್ಲಿ ಪಾಲ್ಗೊಂಡಿದ್ದರು.