ಹೊನ್ನಾವರ: ದಲಿತ ದೌರ್ಜನ್ಯ ಪ್ರಕರಣಗಳಲ್ಲಿ ಆರೋಪಿಗಳ ಬಂಧನವಾಗದೆ ದೌರ್ಜನ್ಯ ಪ್ರಕರಣದ ವಿಚಾರಣೆ ವಿಳಂಬವಾಗುತ್ತಿರುವ ಕುರಿತು,ಕರ್ನಾಟಕ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮೀಸಲಾತಿ ರಕ್ಷಣಾ ವೇದಿಕೆ ವತಿಯಿಂದ ಹೊನ್ನಾವರ ಪೊಲೀಸ್ ವೃತ್ತ ನಿರೀಕ್ಷಕರ ಮುಖಾಂತರ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಿದರು.
ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕ್ರೈಮ್ ನಂ.33/22 ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸದೆ ದೌರ್ಜನ್ಯ ಪ್ರಕರಣಗಳ ವಿಚಾರಣೆಯಲ್ಲಿ ವಿಳಂಬವಾಗುತ್ತಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದೌರ್ಜನ್ಯ ಪ್ರತಿಬಂಧಕ ಕಾಯ್ದೆಯ ಮೂಲ ಉದ್ದೇಶಕ್ಕೆ ಧಕ್ಕೆಯಾಗುತ್ತಿದೆ. ಪ್ರಕರಣದ ಆರೋಪಿಗಳ ಶೀಘ್ರ ಬಂಧನವಾದಲ್ಲಿ ಮಾತ್ರ ಈ ದೌರ್ಜನ್ಯ ಕಾಯ್ದೆಯ ಮೂಲ ಉದ್ದೇಶ ಪೂರ್ಣವಾದಂತಾಗುತ್ತದೆ, ಇತ್ತೀಚಿನ ದಿನಗಳಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಭಯದಲ್ಲಿ ಬದುಕುವ ವಾತಾವರಣ ಸೃಷ್ಟಿಯಾಗುತ್ತಿದೆ, ದೌರ್ಜನ್ಯ ಪ್ರಕರಣಗಳ ಆರೋಪಿಗಳನ್ನು ಶೀಘ್ರ ಬಂಧಿಸಿ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಜನಾಂಗದವರಲ್ಲಿ ವಿಶ್ವಾಸ ಮೂಡಿಸುವರೇ ಎಂದು ಮನವಿಯಲ್ಲಿ ವಿನಂತಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳ ಬಂಧನವಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಉಘ್ರ ರೀತಿಯ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು.ಹೊನ್ನಾವರ ಪೊಲೀಸ್ ಠಾಣೆಯ ಕ್ರೈಮ್ ಸಂಖ್ಯೆ 59/22 ಮತ್ತು ಭಟ್ಕಳ ತಾಲೂಕ ವಿವಿಧ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ದೌರ್ಜನ್ಯ ಪ್ರಕರಣಗಳಲ್ಲಿಯೂ ಸಹ ಆರೋಪಿಗಳ ಬಂಧನವಾಗಿರುವುದಿಲ್ಲ. ಈ ರೀತಿಯ ಧೋರಣೆಗಳು ಜಿಲ್ಲೆಯ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತದ ಕಾರ್ಯ ವೈಖರಿಯ ಮೇಲೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಅವಿಶ್ವಾಸ ಮೂಡುವಂತೆ ಮಾಡಿದೆ. ಈ ಎಲ್ಲಾ ರೀತಿಯ ಅವಿಶ್ವಾಸವನ್ನು ಹೊಗಲಾಡಿಸಿ ಆರೋಪಿಗಳನ್ನು ಶೀಘ್ರ ಬಂಧಿಸಿ ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಪಿಎಸೈ ಶಶಿಕುಮಾರ್ ಮನವಿ ಸ್ವೀಕರಿಸಿದರು. ಪಿಎಸೈಗಳಾದ ಮಹಾಂತೇಶ್, ಸಾವಿತ್ರಿ ನಾಯಕ್,ಆನಂದಮೂರ್ತಿ ಹಾಜರಿದ್ದರು.
ನಂತರ ರವಿ ಮುಕ್ರಿ ಮಾಧ್ಯಮದವರೊಂದಿಗೆ ಮಾತನಾಡಿ, ದಲಿತರ ಮೇಲೆ ದಾಖಲಾಗುತ್ತಿರುವ ಪ್ರಕರಣದ ತನಿಖೆಯಲ್ಲಿ ವಿಳಂಬವಾಗುತ್ತಿದೆ. ಪ್ರಕರಣದ ಆರೋಪಿಗಳು ಬಿಂದಾಸ್ ಆಗಿ ಊರಿನಲ್ಲೆ ತಿರುಗಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆಗೆ ಹಲವು ಬಾರಿ ಮಾಹಿತಿ ನೀಡಿದರು ಸೂಕ್ತ ಕ್ರಮವಿಲ್ಲ.ಇದೇ ರೀತಿ ದೂರುಗಳ ಬಗ್ಗೆ ನಿರ್ಲಕ್ಷ್ಯ ತೋರಿದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಅಭಿಲಾಶ್ ಪಾವಸ್ಕರ್, ಕೃಷ್ಣ ಹರಿಜನ್,ಗಣೇಶ್ ಹಳ್ಳೇರ್, ಜಗದೀಶ್ ಹಳ್ಳೇರ್, ಗಣಪತಿ ಪಾಸ್ಕರ್,ಗೋವಿಂದ ಮುಕ್ರಿ ಹಳದಿಪುರ, ಹನುಮಂತ ಕರ್ಕಿ,ಶಿವು ಮುಕ್ರಿ ಪಾಲ್ಗೊಂಡಿದ್ದರು.