ಕಾರವಾರ:ಕ.ಸಾ.ಪರಿಷತ್ ಕಾರವಾರದಿಂದ ನಾಡೋಜ.ಸಮನ್ವಯ ಕವಿ. ಡಾ.ಚೆನ್ನವೀರ ಕಣವಿಯವರಿಗೆ ಕನ್ನಡ ಭವನ ಕಾರವಾರದಲ್ಲಿ ನುಡಿನಮನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕ.ಸಾ.ಪ ಸದಸ್ಯರಾದ ಜಿ.ಡಿ.ಮನೋಜ ಮಾತನಾಡುತ್ತ ಕಣವಿಯವರ ಬದುಕು ನಮಗೆಲ್ಲ ಆದರ್ಶ. ಅವರು ಸಹಿಷ್ಣುತೆಯ ಹರಿಕಾರರಾಗಿದ್ದರೆಂದರು. ಉಪನ್ಯಾಸಕರಾದ ಶಿವಾನಂದ ತಾಂಡೇಲರವರು ಧಾರವಾಡದ ದಿನಗಳನ್ನು ಸ್ಮರಿಸುತ್ತಾ ಕಲ್ಯಾಣನಗರದ ಒಡನಾಟವನ್ನು ಸ್ಮರಿಸಿಕೊಂಡರು.
ನಿವೃತ್ತ ಪ್ರಾಚಾರ್ಯರಾದ ಎ.ಜಿ.ಕೇರಳಿಕರವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿನ ಅಧ್ಯಯನ ಸಮಯದಲ್ಲಿ ನಡೆಯುತ್ತಿದ್ದ ಸಾಹಿತ್ಯ ಸಮ್ಮೇಳನ ಹಾಗು ಬೇಂದ್ರೆ-ಕಣವಿಯವರ ಬಾಂಧವ್ಯವನ್ನು ನೆನಪಿಸಿಕೊಂಡರು.
ನಿವೃತ್ತ ಮುಖ್ಯೋಪಾಧ್ಯಾಯರಾದ ಪಿ.ಎಸ್.ರಾಣೆಯವರು ಕಣವಿಯವರ ಕುರಿತು ಸ್ವರಚಿತ ಕವನ ವಾಚಿಸಿದರು.
ಜಿಲ್ಲಾ ಕ.ಸಾ.ಪ.ಗೌರವ ಕಾರ್ಯದರ್ಶಿಗಳಾದ ಜಾರ್ಜ ಫರ್ನಾಂಡಿಸ್ ರವರು ಸಾಹಿತ್ಯ ಲೋಕಕ್ಕೆ ಕಣವಿಯವರ ಕೊಡುಗೆ ಅಪಾರ. ಅವರ ಸಾಹಿತ್ಯವನ್ನು ವಿದ್ಯಾರ್ಥಿಗಳಿಗೆ ತಲುಪಿಸಿ, ಹೊಸ ಬರಹಗಾರರನ್ನು ಸಂಶೋಧಿಸೋಣವೆಂದರು.
ಕ.ಸಾ.ಪ.ಕಾರವಾರ ಘಟಕದ ಅಧ್ಯಕ್ಷರಾದ ರಾಮ ನಾಯ್ಕರು ಕಣವಿಯವರಿಗೆ ಕಣವಿಯವರೇ ಸಾಟಿ ಅಂತಹ ಚೇತನದ ಅಗಲಿಕೆ ಸಾರಸ್ವತ ಲೋಕದ ದೊಡ್ಡ ಕೊಂಡಿಯನ್ನು ಕಳಿದುಕೊಂಡಂತಾಗಿದೆ. ಸರಳ, ಸಾಮರಸ್ಯದ ಕವಿ ಡಾ.ಚೆನ್ನವೀರ ಕಣವಿಯವರ ಜೊತೆಗಿನ ಒಡನಾಟ ಇಂದಿಗೂ ನೆನಪಿಸುವಂತಿದೆ ಎಂದರು.
ಕಾರ್ಯಕ್ರಮದಲ್ಲಿ ಕಸಾಪ ಸದಸ್ಯರಾದ ಜಿ.ಡಿ.ಪಾಲೇಕರ, ಮಾರುತಿ ಬಾಡಕರ. ರಮೇಶ ಗುನಗಿ.ಮಚ್ಚೇಂದ್ರ ಮಹಾಲೆ ಉಪಸ್ಥಿತರಿದ್ದರು. ನುಡಿನಮನದಲ್ಲಿ ಕಣವಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಕ.ಸಾ.ಪ ಘಟಕದ ಗಣೇಶ ಸ್ವಾಗತಿಸಿ ನಿರೂಪಿಸಿದರು.ಕಾರ್ಯದರ್ಶಿಗಳಾದ ಬಾಬು ಶೇಖ ವಂದಿಸಿದರು.