ಭಟ್ಕಳ: “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ” ಕಾರ್ಯಕ್ರಮವು ಅತ್ಯಂತ ಉತ್ತಮವಾದ ಕಾರ್ಯಕ್ರಮವಾಗಿದ್ದು ಗ್ರಾಮ ಮಟ್ಟದಲ್ಲಿ ಜನರ ಅಲೆದಾಟವನ್ನು ತಪ್ಪಿಸಿ ಅವರಿಗೆ ಸ್ಥಳದಲ್ಲಿಯೆ ಪರಿಹಾರವನ್ನು ನೀಡುವಂತಹ ಕಾರ್ಯಕ್ರಮವಾಗಿದೆ ಎಂದು ಭಟ್ಕಳ ಉಪವಿಭಾಗಾದಿಕಾರಿ ಮಮತಾದೇವಿ ಹೇಳಿದರು.
ಅವರು ಮಾವಳ್ಳಿ2 ಪಂಚಾಯತ ವ್ಯಾಪ್ತಿಯ ಕೊಡ್ಸುಳು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರಕಾರ ಹಮ್ಮಿಕೊಂಡ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಗ್ರಾಮೀಣ ಭಾಗದ ಜನರಿಗೆ ಮಾಹಿತಿಯ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಆಗಬೇಕಾಗಿದ್ದು
ಉತ್ತಮ ಮಾಹಿತಿಯನ್ನು ಪಡೆದಂತಹ ಪ್ರಜೆಯೂ ನಾಡಿಗೆ ಉತ್ತಮ ಪ್ರಜೆಯಾಗಲು ಸಾಧ್ಯ. ಅದೇ ರೀತಿ ಮುಂದಿನ ಪ್ರಜೆಗಳು ಆದಂತಹ ವಿದ್ಯಾರ್ಥಿಗಳು ಕೇವಲ ಪುಸ್ತಕದ ಹುಳ ವಾಗದೆ ಸರ್ವತೋಮುಖ ಸಾಧನೆಗೆ ಪ್ರಯತ್ನಿಸಿ ಉನ್ನತ ಹಂತಗಳನ್ನು ತಲುಪಬೇಕೆಂದು ಹೇಳಿದರು.
ನರೇಗಾದಡಿಯಲ್ಲಿ ನೊಂದಾಯಿಸಲ್ಪಟ್ಟ 350 ಕಾರ್ಮಿಕರು ಕೆಲಸಕ್ಕೆ ಬರುವುದಿಲ್ಲ. ಬೇರೆ ಕಾರ್ಮಿಕರನ್ನು ನೇಮಿಸಿಕೊಂಡರೆ ದೂರು ನೀಡಲಾಗುತ್ತದೆ. ಇದಕ್ಕೆ ಪರಿಹಾರ ನೀಡಬೆಕೆಂದು ಗ್ರಾಮ ಪಂಚಾಯತ ಗುತ್ತಿಗೆದಾರರು ಉಪವಿಭಾಗಾಧಿಕಾರಿಗಳಿಗೆ ಮನವಿ ಮಾಡಿದರು.
ಮುರುಡೇಶ್ವರ ಪ್ರವಾಸಿ ಸ್ಥಳದಲ್ಲಿ ಗ್ರಾಮ ಪಂಚಾಯತ ಶುದ್ದ ನೀರಿದ ಘಟಕ ತೆರೆಯದೆ ಯಾರದೋ ಮಾತು ಕೇಳಿ ಬೇರೆಡೆ ಸ್ಥಾಪಿಸಲಾಗಿದೆ. ಈ ಬಗ್ಗೆ ಅದಿಕಾರಿಗಳ ಗಮನಕ್ಕೆ ತಂದರೂ ಸ್ಥಳ ಬದಲಾವಣೆಗೆ ಕ್ರಮ ಕೈಗೊಂಡಿಲ್ಲ ಎಂದು ಸಭೆಯಲ್ಲಿದ್ದ ಗ್ರಾಮ ಪಂಚಾಯತ ಸದಸ್ಯ ಜಯಂತ ನಾಯ್ಕ ಆರೋಪಿಸಿದರು.ಇದಕ್ಕೆ ಉತ್ತ ನೀಡುವಂತೆ ವಿಭಾಗಾಧಿಕಾರಿಗಳು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳನ್ನು ಕರೆದಾಗ ಇವರು ಗೈರು ಹಾಜರಾಗಿರುವುದನ್ನು ಮನಗಂಡು ಇವರ ವಿರುದ್ದ ಕ್ರಮ ಕೈಗೊಳ್ಳಲು ತಹಶೀಲ್ದಾರರವರಿಗೆ ಆದೇಶ ನೀಡಿದರು.
ಪ್ರಾರಂಭದಲ್ಲಿ ತಹಶೀಲ್ದಾರ ರವಿಚಂದ್ರ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿ ದೇವಿದಾಸ ಮೊಗೇರ , ತಾಲೂಕ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಕನ ಮನೆ ವಲಯ ಅರಣ್ಯಾಧಿಕಾರಿ ಸವಿತಾ ದೇವಾಡಿಗ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
120 ಅರ್ಜಿಗಳಲ್ಲಿ 90 ಅರ್ಜಿಗಳಿಗೆ ಪರಿಹಾರವನ್ನು ಒದಗಿಸಿ ಫಲಾನುಭವಿಗಳಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರ ಮುಖೇನ ಸೌಲಭ್ಯಗಳ ವಿತರಣೆಯನ್ನು ಮಾಡಲಾಯಿತು.