ಸಿದ್ದಾಪುರ: ಗ್ರಾಮೀಣ ಜನತೆಯ ಜೀವನಾಡಿ ಹೈನುಗಾರಿಕೆ ಆಗಿದೆ. ಪಾರಂಪರಿಕವಾದ ಹಾಗೂ ಕೃಷಿಗೆ ಪೂರಕವಾದ ಹೈನುಗಾರಿಕೆಯನ್ನು ಮುಂದುವರೆಸಿಕೊಂಡು ಹೋಗುವುದು ನಮ್ಮ ಕರ್ತವ್ಯವಾಗಿದೆ. ಉತ್ತಮ ಗುಣಮಟ್ಟದ ಹಾಲನ್ನು ನೀಡಿದರೆ ಮಾತ್ರ ಹಾಲು ಉತ್ಪಾದಕರ ಸಹಕಾರಿ ಸಂಘಗಳು ಜೀವಂತವಾಗಿರಲು ಸಾಧ್ಯ ಎಂದು ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಪಿ.ವಿ.ನಾಯ್ಕ ಬೇಡ್ಕಣಿ ಹೇಳಿದರು.
ತಾಲೂಕಿನ ಹಾರ್ಸಿಕಟ್ಟಾ ಗ್ರಾಪಂ ವ್ಯಾಪ್ತಿಯ ಮಾದ್ಲಮನೆಯಲ್ಲಿ ಧಾರವಾಡ ಹಾಲು ಒಕ್ಕೂಟದ ಅಡಿಯಲ್ಲಿ ನೂತನವಾಗಿ ಆರಂಭಗೊಂಡ ಮಹಿಳಾ ಹಾಲು ಉತ್ಪಾದಕರ ಸಹಕಾರಿ ಸಂಘವನ್ನು ಹಾಲು ಅಳೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಸಂಘಕ್ಕೆ ಬೇಕಾದ ಎಲ್ಲ ಮೂಲಭೂತ ಸೌಲಭ್ಯವನ್ನು ಒಕ್ಕೂಟ ನೀಡುತ್ತದೆ. ಆದರೆ ಸಂಘವನ್ನು ಬೆಳೆಸುವ ಜವಾಬ್ದಾರಿ ಸದಸ್ಯರದ್ದಾಗಿದೆ ಎಂದು ಹೇಳಿದರು.
ಹಾರ್ಸಿಕಟ್ಟಾ ಗ್ರಾಪಂ ಅಧ್ಯಕ್ಷೆ ವಿದ್ಯಾ ಪ್ರಕಾಶ ನಾಯ್ಕ ಅಧ್ಯಕ್ಷತೆವಹಿಸಿದ್ದರು.
ಹಾರ್ಸಿಕಟ್ಟಾ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿ ರಮೇಶ ಹೆಗಡೆ ಹಾರ್ಸಿಮನೆ ಸಂಘದ ಉದ್ದೇಶ ಹಾಗೂ ಸಂಘದಲ್ಲಿ ಸದಸ್ಯರ ಪಾತ್ರದ ಕುರಿತು ಮಾತನಾಡಿದರು.
ಮಂಜುನಾಥ ಹೆಗಡೆ, ವಿದ್ಯಾ ನಾಯ್ಕ, ಯಶೋದಾ ನಾಯ್ಕ, ಮಾಲತಿ ನಾಯ್ಕ,ಕೆ.ಟಿ.ಗೌಡ ,ಎನ್ ಆರ್ ಎಲ್‍ಎಂನ ತಾಲೂಕು ಸಂಯೋಜಕಿ ಮಾಲತಿ ನಾಯ್ಕ, ವಿ.ಚಂದ್ರಶೇಖ ಭಟ್ಟ ಗಾಳೀಮನೆ, ಸ್ಥಳೀಯರಾದ ಕೆ.ಟಿ.ಗೌಡ,ಕನ್ನ ನಾಯ್ಕ, ಪೊಲೀಸ್ ಸಿಬ್ಬಂದಿ ಅನಿಲ್ ನಾಯ್ಕ, ನಿಡಗೋಡ ಬಿಎಂಸಿಯ ಮಂಜುನಾಥ ಹೆಗಡೆ, ಸಂಘದ ಸದಸ್ಯರು ಹಾಗೂ ಗ್ರಾಮಸ್ಥರಿದ್ದರು.
ಇದೇ ಸಂದರ್ಭದಲ್ಲಿ ದೇವಿ ತಿಮ್ಮ ಗೌಡ ಮಾದ್ಲಮನೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಯಶೋದಾ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.