ಬೆಂಗಳೂರು: ಹಿಜಾಬ್ ವಿವಾದದ ನಡುವೆಯೇ ಇಂದಿನಿಂದ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳು ಆರಂಭವಾಗಿದೆ. ಈ ಬಗ್ಗೆ ಕಠಿಣ ಆದೇಶವನ್ನು ಹೊರಡಿಸಿರುವ ಪದವಿ ಪೂರ್ವ ಶಿಕ್ಷಣ ಇಲಾಖೆಯು ಇಂದು ಪರೀಕ್ಷೆಗೆ ಗೈರಾದರೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ.
ರಾಜ್ಯಾದ್ಯಂತ ಹಿಜಾಬ್ ವಿವಾದ ಇನ್ನೂ ಜೀವಂತವಾಗಿದೆ. ಕೆಲ ವಿದ್ಯಾರ್ಥಿನಿಯರು ಶಿಕ್ಷಣಕ್ಕಿಂತ ಹಿಜಾಬ್ ಮುಖ್ಯ ಎಂದು ತರಗತಿ ಬಹಿಷ್ಕರಿಸುತ್ತಿದ್ದಾರೆ. ಈ ಉದ್ವಿಗ್ನತೆ ಮಧ್ಯೆ ಇಂದಿನಿಂದ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳು ನಡೆಯುತ್ತಿದೆ. ಹೀಗಾಗಿ ಹಿಜಾಬ್ ವಿವಾದದಿಂದ ವಿದ್ಯಾರ್ಥಿನಿಯರು ಪರೀಕ್ಷೆಗೆ ಗೈರಾದರೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ಇಲ್ಲ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಎಚ್ಚರಿಕೆಯನ್ನು ರವಾನಿಸಿ ಹಿಜಾಬ್ ಹೋರಾಟಗಾರ್ತಿಯರಿಗೆ ಬಿಸಿ ಮುಟ್ಟಿಸಿದೆ.
ಈ ನಿಟ್ಟಿನಲ್ಲಿ ಇಲಾಖೆ ಈಗಾಗಲೇ ಪ್ರಾಕ್ಟಿಕಲ್ ಪರೀಕ್ಷೆಯ ವೇಳಾಪಟ್ಟಿ ಪ್ರಕಟಿಸಿದ್ದು, ಅದರಂತೆಯೇ ಪಿಯು ಕಾಲೇಜುಗಳಲ್ಲಿ ಪರೀಕ್ಷೆಗಳು ನಡೆಯಲಿವೆ .ಹಿಜಾಬ್ ವಿವಾದಿಂದಾಗಿ ಕೆಲವು ಕಾಲೇಜುಗಳಲ್ಲಿ ಗೊಂದಲ ಏರ್ಪಟ್ಟಿದೆ. ಆದರೂ ನಿಗದಿತ ವೇಳಾಪಟ್ಟಿಯಂತೆಯೇ ಪರೀಕ್ಷೆಗಳನ್ನು ಇಲಾಖೆ ನಡೆಸುತ್ತಿದೆ.