ಅಂಕೋಲಾ : ಭಾರತ ರತ್ನ ದಿ. ಲತಾ ಮಂಗೇಶ್ಕರ ಅವರು ಗಾಯಕಿಯಾಗಿ ಅಭೂತಪೂರ್ವ ಸಾಧನೆಯೊಂದಿಗೆ ಗುರುತಿಸಿಕೊಂಡಿದ್ದಾರೆ. ನೆರೆಯ ಗೋವಾದೊಂದಿಗೆ ಬಾಂಧವ್ಯವನ್ನು ಹೊಂದಿರುವುದರೊಂದಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಂಟು ಹೊಂದಿದ್ದರು ಎಂದು ಗೋಮಾಂತಕ ಸಮಾಜ ಅಭಿವೃದ್ಧಿ ಸಂಘದ ಅಧ್ಯಕ್ಷ ಭಾಸ್ಕರ ನಾರ್ವೇಕರ ಹೇಳಿದರು.
ಅವರು ಪಟ್ಟಣದ ಶಾಂತಾದುರ್ಗ ದೇವಸ್ಥಾನದ ಸಭಾ ಮಂಟಪದಲ್ಲಿ ಗೋಮಾಂತಕ ಸಮಾಜ ಅಭಿವೃದ್ಧಿ ಸಂಘದವರು ಹಮ್ಮಿಕೊಂಡಿದ್ದ ಸ್ವರ ಶೃದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಉದ್ಯಮಿ ಕಿರಣ ನಾರ್ವೇಕರ ಮಾತನಾಡಿ, ಸ್ವರ ಸಾಮ್ರಾಜ್ಞೆ ಲತಾ ಮಂಗೇಶ್ಕರ ಅವರು ನಮ್ಮಿಂದ ದೂರವಾಗಿದ್ದರೂ ಅವರ ಗಾಯನ ಸ್ವರ ಇಂದಿಗೂ ಅಜರಾಮರವಾಗಿದೆ ಎಂದು ಹೇಳಿದರು.
ಡಾ. ಮಿನಲ್ ನಾರ್ವೇಕರ ಮಾತನಾಡಿ, ಇಂಪಾದ ಹಾಡಿನ ಮೂಲಕ ದೇಶದೆಲ್ಲೆಡೆ ಅಪಾರ ಅಭಿಮಾನಿ ಬಳಗವನ್ನು ಕಟ್ಟಿಕೊಂಡಿರುವ ಲತಾ ಮಂಗೇಶ್ಕರರವರ ನಿಧನ ದೇಶಕ್ಕೆ ತುಂಬಲಾರದ ನಷ್ಟ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ನಾಗೇಂದ್ರ ಅಂಕೋಲೆಕರ, ಅನಿಲ ಬಾನಾವಳಿಕರ, ವಿಜಯ ಹನುಮಟ್ಟೇಕರ, ಮಾಯಾ ಈಡೂರಕರ್, ಗೀತಾ ಹಾರ್ವಾಡೇಕರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಗಾಯಕಿಯಾದ ಸ್ನೇಹಾ ನಾರ್ವೇಕರ, ಜಯಶ್ರೀ ಬಾನಾವಳಿಕರ, ವಿಜಯಶ್ರೀ ನಾಗ್ವೇಕರ ಇವರು ಹಾಡಿನ ಮೂಲಕ ಶೃದ್ಧಾಂಜಲಿ ಅರ್ಪಿಸಿದರು.
ಗೋಮಾಂತಕ ಸಮಾಜ ಅಭಿವೃದ್ಧಿ ಸಂಘದ ಉಪಾಧ್ಯಕ್ಷ ದಿನಕರ ಅಂಕೋಲೆಕರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಗಣೇಶ ನಾಗ್ವೇಕರ ಕಾರ್ಯಕ್ರಮ ನಿರೂಪಿಸಿದರು.