ಅಂಕೋಲಾ : ಬಿಜೆಪಿ ಸರಕಾರಕ್ಕೆ ಬಂದು 3 ವರ್ಷ ಕಳೆದರೂ ಲಕ್ಷಾಂತರ ಜನರ ಅರ್ಜಿಗಳನ್ನು ಜಿಲ್ಲೆಯಲ್ಲಿ ವಿಲೇವಾರಿ ಮಾಡಿ ಹಕ್ಕು ಪತ್ರ ನೀಡಿಲ್ಲ. ಸರಕಾರದ ಮಂತ್ರಿಗಳ ಮತ್ತು ಶಾಸಕರುಗಳ ದಿವ್ಯ ನಿರ್ಲಕ್ಷ್ಯದಿಂದ ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಈಗಿನ ಶಾಸಕರು ಮುಂದಿನ ಚುನಾವಣೆ ಬರುವುದರೊಳಗೆ ಅರಣ್ಯ ಅತಿಕ್ರಮಣದಾರರ ಸಮಸ್ಯೆಗೆ ಒಂದು ಸುಖಾಂತ್ಯವನ್ನು ಒದಗಿಸಲು ಕ್ರಮ ವಹಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಸಮಿತಿ ಮಾಧ್ಯಮಗಳ ಮೂಲಕ ಬಹಿರಂಗ ಪತ್ರ ಬರೆದು ಮನವಿ ಮಾಡಿದೆ.
ಅರಣ್ಯ ಹಕ್ಕು ಪತ್ರದ ಕಾಯ್ದೆ-2006 ರ ಅಡಿ ಅರ್ಜಿ ಹಾಕಿಕೊಂಡು ಬಡ ಅರಣ್ಯ ಅತಿಕ್ರಮಣದಾರರು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಅರಣ್ಯ ಇಲಾಖೆಯವರು ಬಡ ಅತಿಕ್ರಮಣದಾರರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಮರಗಿಡಗಳನ್ನು ಕಿತ್ತು ಹಾಕಿ ತೀವೃ ಆರ್ಥಿಕ ಸಂಕಷ್ಟಕ್ಕೆ ಕಾರಣರಾಗುತ್ತಿದ್ದಾರೆ. ಬಡಜನರ ರಕ್ಷಣೆಗೆ ಸರಕಾರದ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ಅಲ್ಲಿ ಬರುತ್ತಿಲ್ಲ.
ಜಿಲ್ಲೆಯಲ್ಲಿ 1980 ರ ನಂತರ ಕನಿಷ್ಟ 50 ವರ್ಷಗಳಿಂದ ಅರಣ್ಯ ಭೂಮಿ ಹಕ್ಕಿಗಾಗಿ ನೂರಾರು ಹೋರಾಟಗಳು ನಡೆದಿವೆ. ಸರಕಾರಗಳ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಸಚಿವ ಸಂಪುಟದ ಉಪಸಮಿತಿ ರಚಿಸಿ ಗೋಮಾಳ, ಗೈರಾಣು, ಬೆಟ್ಟಭೂಮಿ ಮುಂತಾದು ಜಮೀನನ್ನು ಖಾಸಗಿಯವರಿಗೆ ಒಪ್ಪಿಸಲು ಮುಂದಾಗಿರುವುದನ್ನು ಕರ್ನಾಟಕ ಪ್ರಾಂತ ರೈತ ಸಂಘ ಖಂಡಿಸುತ್ತದೆ.
ಈ ಬಡಜನ ವಿರೋಧಿ ಉಪಸಮಿತಿ ರಚನೆಯನ್ನು ವಾಪಸ್ ಪಡೆಯಬೇಕು. ಭೂಮಿ ಹಕ್ಕಿಗಾಗಿ ಈಗಾಗಲೇ ಅರ್ಜಿ ಸಲ್ಲಿಸಲಾದ ಬಡ ಸಾಗುವಳಿದಾರರು ಜಮೀನುಗಳ ಸರ್ವೆ ನಡೆಸಿ ಫಾರಂ ನಂ.50, 53 ಹಾಗೂ 57 ರಲ್ಲಿ ಅಜಿಸಲ್ಲಿಸಿದವರಿಗೆ ಭೂಮಿ ಹಕ್ಕು ಪತ್ರ ನೀಡಬೇಕು. ಅರಣ್ಯ ಭೂಮಿ ಹಕ್ಕು ಪತ್ರ ನೀಡಲು ಕಾನೂನುಗಳಲ್ಲಿ ತೊಡಕುಗಳಿದ್ದರೆ ಅದನ್ನು ಸರಿಪಡಿಸಿ ಭೂಮಿ ನೀಡಬೇಕು. ರೈತರ ಬೆಳೆಗಳಿಗೆ ಪ್ರೋತ್ಸಾಹ ಧನದೊಂದಿಗೆ ಬೆಂಬಲ ಬೆಲೆಗೆ ಖರೀದಿಸಲು ಸುಗ್ಗಿ ಪೂರ್ವದಿಂದಲೇ ಖರೀದಿ ಕೇಂದ್ರ ತೆರೆಯಬೇಕು. ಪೋಡಿ ಹಾಗೂ ಹದ್ದುಬಸ್ತು ಸರ್ವೆ ಮತ್ತಿತ್ತರೆ ಶುಲ್ಕ ಏರಿಕೆ ವಾಪಸ್ಸಾಗಬೇಕು.
ಕರ್ನಾಟಕ ಸರಕಾರ ಜಾರಿಗೊಳಿಸಿದ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ-2020, ಎ.ಪಿ.ಎಂ.ಸಿ ತಿದ್ದುಪಡಿ ಕಾಯ್ದೆ-2020 ಹಾಗೂ ಜಾನುವಾರು ಹತ್ಯೆ ನಿಷೇಧ ಕಾಯ್ದೆ-2020 ಗಳನ್ನು ಸರಕಾರ ವಾಪಸ್ಸು ಪಡೆಯಬೇಕು. ವಿದ್ಯುತ್ ಖಾಸಗೀಕರಣ ಕೈಬಿಡಬೇಕು. ಈ ಬೇಡಿಕೆಗಳ ಮಧ್ಯೆ ವಿಧಾನಸಭೆಯಲ್ಲಿ ಚರ್ಚಿಸಿ ಬಡ ಜನತೆಯ ಪರವಾಗಿ ತೀರ್ಮಾನ ಬರಲು ಜಿಲ್ಲೆಯ ಶಾಸಕರು ಮಧ್ಯ ಪ್ರವೇಶಿಸಿಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ ಒತ್ತಾಯಿಸುತ್ತಾರೆಂದು ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ ತಿಳಿಸಿದ್ದಾರೆ.