ಅಂಕೋಲಾ:ನಮಗೆ ನಮ್ಮ ರಾಷ್ಟ್ರವೇ ಮೊದಲು. ರಾಷ್ಟ್ರೀಯತೆಯನ್ನು ಒಪ್ಪಿ ಸಮಾನವಾಗಿ ಬದುಕಬೇಕು. ಹಿಜಾಬ್ ನೆಪದಲ್ಲಿ ಸಂಘರ್ಷ ಹುಟ್ಟಿಸಲಾಗುತ್ತಿದೆ. ಇದು ಧರ್ಮ ಸಂಘರ್ಷವಲ್ಲ ದೇಶಪ್ರೇಮ ಮತ್ತು ದೇಶದ್ರೋಹಿಗಳ ನಡುವಿನ ಸಂಘರ್ಷ ಎಂದು ವಕ್ತಾರೆ ಚೈತ್ರಾ ಕುಂದಾಪುರ ಹೇಳಿದರು.
ಅವರು ಛತ್ರಪತಿ ಶಿವಾಜಿ ಜಯಂತ್ಯೋತ್ಸವ ಸಮಿತಿ ಬೇಲೇಕೇರಿ ಇವರು ಆಯೋಜಿಸಿದ ಛತ್ರಪತಿ ಶಿವಾಜಿ ಜಯಂತ್ಯೋತ್ಸವ 2022 ರ ದಿಕ್ಸೂಚಿ ಭಾಷಣದಲ್ಲಿ ಮಾತನಾಡಿ ಶಿವಾಜಿಯ ರಾಷ್ಟ್ರಪ್ರೇಮ ಇಂದಿಗೂ ಮಾದರಿ. ಅವರಲ್ಲಿ ಧರ್ಮಾಂಧತೆ ಇರಲಿಲ್ಲ. ಮುನ್ನೂರು ಸೈನಿಕರಿಂದ ಪ್ರಾರಂಭಿಸಿ ಲಕ್ಷಾಂತರ ಸೈನಿಕರ ಸೈನ್ಯಕಟ್ಟಿ ರಾಷ್ಟ್ರಕ್ಕಾಗಿ ವಿದೇಶೀಯರ, ದೇಶದ್ರೋಹಿಗಳ ವಿರುದ್ಧ ಹೋರಾಡಿದವರು. ಅವರನ್ನು ಬೆಳೆಸಿದ ಅವರ ತಾಯಿ ಜೀಜಾಬಾಯಿ ಶ್ರೇಷ್ಠ. ಈ ಕಾಲದಲ್ಲಿ ಅಂತಹ ಹತ್ತು ಜೀಜಾಬಾಯಿಗಳಿದ್ದರೆ ನೂರು ಶಿವಾಜಿಗಳನ್ನು ಸೃಷ್ಠಿಸಬಹುದಿತ್ತು. ಮಾತೆಯರು ಮುಂದಿನ ಪೀಳಿಗೆಯನ್ನು ಕಟ್ಟುವಲ್ಲಿ ಯಶಸ್ವಿಯಾದರೆ ವರ್ತಮಾನ ಮತ್ತು ಭವಿಷ್ಯ ಸುಬಧ್ರವಾಗಿರುತ್ತದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಭಾರತೀಯ ಕಿಸಾನ ಸಂಘದ ಅಧ್ಯಕ್ಷ ಶಿವರಾಮ ಗಾಂವಕರ ಮಾತನಾಡಿ ಇಡೀ ವಿಶ್ವವೇ ಭಾರತಕ್ಕೆ ವಿಶ್ವಗುರು ಸ್ಥಾನಮಾನ ನೀಡಿದೆ. ಭಾರತದಲ್ಲಿ ಉಳಿಯುವದಾದರೆ ಮೊದಲು ಭಾರತೀಯರಾಗಿರಿ. ಮನುಷ್ಯನ ಹುಟ್ಟಿನಿಂದ ಸಾವಿನವರೆಗೆ ಏನೇನು ಶಿಕ್ಷಣ ಬೇಕೊ ಆ ಎಲ್ಲ ಶಿಕ್ಷಣ ಪದ್ದತಿಯನ್ನು ಭಾರತವೇ ನೀಡಿದೆ. ನಮ್ಮಲ್ಲಿ ಒಗ್ಗಟ್ಟಿಲ್ಲದಿದ್ದರೆ ಹೊರಗಿನವರು ಬಂದು ಬೆಂಕಿ ಹಚ್ಚಬೇಕಿಲ್ಲ ನಮ್ಮಲ್ಲೇ ಬೆಂಕಿ ಹಚ್ಚುವವರು ಇರುತ್ತಾರೆ ಹೀಗಾಗಿ ನಾವು ಶಿವಾಜಿಯಂತಹ ದೇಶಪ್ರೇಮವನ್ನು ಹೊಂದಿರಬೇಕು ಎಂದರು.
ನ್ಯಾಯವಾದಿ ನಾಗರಾಜ ನಾಯಕ ಅಧ್ಯಕ್ಷತೆಯನ್ನು ವಹಿಸಿ ಶಿವಾಜಿಯವರ ಕುರಿತು ಮಾತನಾಡಿದರು.
ವೇದಿಕೆಯಲ್ಲಿ ನಿತ್ಯಾನಂದ ಗಾಂವಕರ, ಕೇಶವಾನಂದ ನಾಯಕ, ರಾಜು ತಾಂಡೇಲ, ಸಂಜೀವ ಕುಚಿನಾಡ, ಬಿಂದೇಶ ಹಿಚ್ಕಡ, ರಾಮ ಬಾನಾವಳಿಕರ, ಅಜಿತ ನಾಯಕ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಶಾಂತ ನಾಯಕ, ಭಜರಂಗದಳದ ತಾಲೂಕ ಅಧ್ಯಕ್ಷ ಕಿರಣ ನಾಯ್ಕ ಉಪಸ್ಥಿತರಿದ್ದರು.
ಸ್ಥಳೀಯ ಮಹಿಳೆಯರಾದ ಆಶಾ ನಾಯ್ಕ ಹಾಗೂ ಮುಂಗಿ ಗೌಡ ಇವರನ್ನು ಜೀಜಾಬಾಯಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಿತ್ಯಾನಂದ ಗಾಂವಕರ ಸರ್ವರನ್ನು ಸ್ವಾಗತಿಸಿದರು. ಸಮಿತಿಯ ಕಾರ್ಯಕರ್ತರು ಮತ್ತು ಅಭಿಮಾನಿಗಳು ಬೆಳಂಬಾರದಿಂದ ಬೇಲೇಕೇರಿವರೆಗೆ ಬೈಕ್ ರ್ಯಾಲಿ ನಡೆಸಿದರು. ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಶಾಂತ ನಾಯಕ ಬೈಕ್ ರ್ಯಾಲಿಯನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕಾರ್ಯಕರ್ತರು, ಊರ ನಾಗರಿಕರು ಇದ್ದರು.