• Slide
  Slide
  Slide
  previous arrow
  next arrow
 • ವಿಷಮೇವಿನಿಂದ ರಸಮೇವಿನೆಡೆಗೆ ಹೈನುಗಾರರು ಹೆಜ್ಜೆಯನ್ನಿಡಲಿ; ಸುರೇಶ್ಚಂದ್ರ ಕೆಶಿನ್ಮನೆ

  300x250 AD

  ಶಿರಸಿ: ಜಿಲ್ಲೆಯ ಹೈನುಗಾರರು ಬಹುತೇಕ ಬಿಳೆಹುಲ್ಲನ್ನು ನಂಬಿಕೊಂಡಿದ್ದು, ಈ ಬಿಳೆಹುಲ್ಲಿನ ರೂಪದಲ್ಲಿನ ವಿಷಮೇವನ್ನೇ ದನಗಳಿಗೆ ಹಾಕಲಾಗುತ್ತಿದೆ. ಹಾಗಾಗಿ ವಿಷಮೇವಿನ ಬದಲಾಗಿ ರಸಮೇವನ್ನು ಹಾಕುವಂತಾಗಬೇಕು ಧಾರವಾಡ ಹಾಲು ಒಕ್ಕೂಟ ಹಾಗು ಕೆ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಹೇಳಿದರು.

  ಅವರು ಶನಿವಾರ ನಗರದ ಟಿ.ಆರ್.ಸಿ. ಸಭಾಭವನದಲ್ಲಿ ತೋಟಗಾರ್ಸ್ ಗ್ರೀನ್ ಗ್ರೂಪ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ಹಾಗು ಟಿ.ಆರ್.ಸಿ ಸಹಯೋಗದಲ್ಲಿ ನಡೆದ ‘ಹೈನುಗಾರಿಕೆಯಲ್ಲಿ ರಸಮೇವಿನ ಬಳಕೆ ಮತ್ತು ಮಹತ್ವ’ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಬಿಳೆಹುಲ್ಲನ್ನು ನಂಬಿ ಹೈನುಗಾರಿಕೆಯನ್ನು ಮಾಡುವ ಜನರು ನಮ್ಮ ಜಿಲ್ಲೆಯವರಾಗಿದ್ದಾರೆ. ಪಶುಗಳಿಗೆ ಆಹಾರವಾಗಿ ಬಯಲುಸೀಮೆಗಳಿಂದ ಹೆಚ್ಚು ಬರುವ ಬಿಳೆಹುಲ್ಲುಗಳು ಬಹುತೇಕ ಕೀಟನಾಷಕ, ರಾಸಾಯನಿಕ ಮಿಶ್ರಣಗಳಿಂದ ವಿಷಪೂರಿತವಾಗಿರುತ್ತವೆ. ಅದನ್ನೇ ನಾವು ಪಶುಗಳಿಗೆ ಆಹಾರವಾಗಿ ಹಾಕುತ್ತಿದ್ದೇವೆ. ಇದನ್ನು ಹಂತ ಹಂತವಾಗಿ ಕಡಿಮೆ ಮಾಡಬೇಕು. ಉತ್ತಮ ಗುಣಮಟ್ಟದ ಮತ್ತು ಆರೋಗ್ಯಕ್ಕೆ ಹಿತವಾಗುವ ಆಹಾರವನ್ನು ಪಶುಗಳಿಗೆ ನೀಡಬೇಕಿದೆ.

  ಜಿಲ್ಲೆಯಲ್ಲಿ ಕಳೆದ ಕೆಲ ವರ್ಷಗಳಿಂದ ನಾನಾ ಕಾರಣಕ್ಕೆ ಕೊಟ್ಟಿಗೆಯನ್ನು ಮುಚ್ಚುವವರೇ ಹೆಚ್ಚಾಗಿದ್ದಾರೆ. ಆದರೆ ಇತ್ತಿಚಿನ ದಿನದಲ್ಲಿ ಕನಿಷ್ಟ ಒಂದು ದನವನ್ನಾದರೂ ಸಾಕುವ ಮೂಲಕ ಹೈನುಗಾರಿಕೆಗೆ ಪ್ರೋತ್ಸಾಹ ದೊರೆಯುತ್ತಿರುವುದು ಆಶಾದಾಯಕ. ರೈತರು ಕೊಟ್ಟಿಗೆ ವಿಚಾರದಲ್ಲಿ ನಷ್ಟ ಎಂದೇ ದೂರುತ್ತಾರೆ. ಆದರೆ ಸರಿಯಾದ ಆರ್ಥಿಕ ಶಿಸ್ತು ಬೆಳೆಸಿಕೊಂಡಲ್ಲಿ ಹೈನುಗಾರಿಕೆಯನ್ನೂ ಸಹ ಲಾಭದ ಉದ್ಯಮವಾಗಿ ಮಾಡಬಹುದು ಮತ್ತು ನಮ್ಮ ಆರೋಗ್ಯದ ಜೊತೆಗೆ ಕೃಷಿಯನ್ನು ಬಲಪಡಿಸಬಹುದಾಗಿದೆ ಎಂದರು.

  ಪಶುಗಳಿಗೆ ಉತ್ತಮ ಗುಣಮಟ್ಟದ ಆಹಾರವನ್ನು ಕೊಡುವುದರಿಂದ ಗುಣಮಟ್ಟದ ಹಾಲು ದೊರೆಯುತ್ತದೆ. ಆ ನಿಟ್ಟಿನಲ್ಲಿ ರಸಮೇವಿನಂತ ಉತ್ಪನ್ನಗಳು ಸಹಕಾರಿ. ರಸಮೇವನ್ನು ಸರಬರಾಜು ಮಾಡಲು ಪ್ರಾರಂಭಿಸಿರುವ ಗ್ರೀನ್ ಗ್ರೂಪ್ ಕಂಪನಿಯ ಶ್ರಮ ನಿಜಕ್ಕೂ ಶ್ಲಾಘನೀಯ. ಮುಂದಿನ ದಿನದಲ್ಲಿ ನಮ್ಮ ಜಿಲ್ಲೆಯಲ್ಲಿಯೇ ಕಂಪನಿ ವತಿಯಿಂದ ರಸಮೇವು ತಯಾರಿಕಾ ಘಟಕ ಆರಂಭಗೊಳ್ಳಲಿ ಎಂದು ಶುಭ ಹಾರೈಸಿದರು‌.

  ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹೈನೋದ್ಯಮಿ ರಾಜೇಶ್ವರಿ ಹೆಗಡೆ ಗೋಳಿಕೊಪ್ಪ ಮಾತನಾಡಿ, ಹೈನುಗಾರಿಕೆಯನ್ನು ನಡೆಸುವುದು ಇತ್ತಿಚಿನ ದಿನದಲ್ಲಿ ಕಷ್ಟ ಎನಿಸುತ್ತಿದೆ. ಸಮಯಕ್ಕೆ ಸರಿಯಾಗಿ ಎಲ್ಲ ಕೆಲಸವೂ ನಡೆಯಬೇಕು. ಹಾಗಾಗಿ ದೊಡ್ಡ ಪ್ರಮಾಣದಲ್ಲಿ ಹೈನೋದ್ಯಮ ನಡೆಸುತ್ತಿರುವವರು ಕೆಲಸಗಾರರನ್ನು ಅವಲಂಬಿಸುವುದು ಅನಿವಾರ್ಯ. ರಸಮೇವಿನಂತಹ ಉತ್ಪನ್ನಗಳು ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದಲ್ಲಿ ದೊರೆಯುವಂತಾದರೆ ಹೈನುಗಾರಿಕೆಗೆ ತುಂಬಾ ಸಹಕಾರಿಯಾಗುತ್ತದೆ. ಆ ನಿಟ್ಟಿನಲ್ಲಿ ಗ್ರೀನ್ ಗ್ರೂಪ್ ಸಂಸ್ಥೆ ಹೆಜ್ಜೆಯಿಟ್ಟಿದ್ದು ಪ್ರಶಂಸನೀಯ ಎಂದರು.

  300x250 AD

  ಜಿಲ್ಲೆಯ ಖ್ಯಾತ ಪಶು ವೈದ್ಯರಾದ ಡಾ. ಪಿ.ಎಸ್. ಹೆಗಡೆ ಪ್ರಸ್ತಾವಿಕ ಮಾತುಗಳನ್ನಾಡಿ, ನಮ್ಮ ಮನೆಗಳಲ್ಲಿನ ದನಗಳಿಗೆ ಬಿಳೆಹುಲ್ಲನ್ನು ಹಾಕುವುದು ಅನಿವಾರ್ಯವಾಗಿದೆ. ಆದರೆ ಪಶುಗಳಲ್ಲಿ ಇರುವ ಪೋಷಕಾಂಶಗಳನ್ನು ಹೀರಿಕೊಳ್ಳುವ ಗುಣ ಬಿಳೆಹುಲ್ಲಿನದ್ದಾಗಿದೆ. ಹಾಗಾಗಿ ಬಿಳೆಹುಲ್ಲನ್ನು ತೀರಾ ನೆಚ್ಚಿಕೊಳ್ಳುವುದು ಪಶುಗಳ ಆರೋಗ್ಯದ ದೃಷ್ಟಿಯಿಂದ ಹಿತವಲ್ಲ. ಪಶುಗಳ ದೃಷಿಯಿಂದ ಉತ್ತರ ಕನ್ನಡ ಜಿಲ್ಲೆಯು ರೋಗಗಳ ತವರೂರು ಎನ್ನುವುದು ಕಹಿಸತ್ಯವಾಗಿದೆ. ಹೀಗಿದ್ದರೂ ಸಹ ಅವೆಲ್ಲವನ್ನು ಎದುರಿಸಿ ಹೈನುಗಾರಿಕೆ ನಡೆಸುತ್ತಿರುವ ರೈತರ ಸಾಧನೆಯನ್ನು ಶ್ಲಾಘಿಸಬೇಕು ಎಂದರು. ಪಶುಗಳಲ್ಲಿ ಇಮ್ಯೂನಿಟಿ ಮತ್ತು ಆರೋಗ್ಯವನ್ನು ಹೆಚ್ಚಿಸುವಲ್ಲಿ ರಸಮೇವಿನ ಪಾತ್ರ ಹೆಚ್ಚಿದೆ. ಹಾಗಾಗಿ ಜಿಲ್ಲೆಯ ರೈತರು ರಸಮೇವನ್ನು ಬಳಸುವತ್ತ ಹೆಚ್ಚು ಗಮನಹರಿಸಬೇಕು ಎಂದರು. ಉತ್ತಮ ಗುಣಮಟ್ಟದ ರಸಮೇವನ್ನು (ಸೈಲೇಜ್) ನೀಡುವ ದೃಷ್ಟಿಯಿಂದ ಸಂಸ್ಥೆ ಕಾರ್ಯನಿರ್ವಹಿಸುವಂತಾಗಲಿ ಎಂದರು.

  ತೋಟಗಾರ್ಸ್ ಗ್ರೀನ್ ಗ್ರೂಪ್ ಕಂಪನಿ ಅಧ್ಯಕ್ಷ ಶ್ರೀಧರ ಹೆಗಡೆ ಕಡವೆ ಅಧ್ಯಕ್ಷೀಯ ನುಡಿಗಳನ್ನಾಡಿ, ರೈತರಿಗೆ ಕಂಪನಿ ವತಿಯಿಂದ ಗುಣಮಟ್ಟದ ರಸಮೇವು (ಸೈಲೇಜ್) ನೀಡಲಾಗುತ್ತದೆ. ಜೊತೆಗೆ ಕೃಷಿ ಸಂಬಂಧಿತ ಕೆಲಸವನ್ನು ಸಹ ಮಾಡಿಸಿಕೊಡುವುದು ಹಾಗು ಕೆಲಸಕ್ಕೆ ನುರಿತ ಜನರನ್ನು ಕಳುಹಿಸುವ ವ್ಯವಸ್ಥೆ ಕಂಪನಿಯಿಂದ ನಡೆಯುತ್ತಿದೆ ಎಂದರು.

  ‘ದಿನಬಳಕೆಯಲ್ಲಿ ರಸಮೇವು (ಸೈಲೇಜ್) ಬಳಕೆ ಮತ್ತು ಮಹತ್ವ’ ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಗದಗ ಪಶು ವೈದ್ಯಕೀಯ ಕಾಲೇಜಿನ ಎನಿಮಲ್ ನ್ಯೂಟ್ರಿಷನ್ ವಿಭಾಗದ ಮುಖ್ಯಸ್ಥರಾದ ಡಾ. ಟಿ. ತಿರುಮಲೇಶ ಆಗಮಿಸಿ ರಸಮೇವಿನ ತಯಾರಿ, ಮಹತ್ವ ಹಾಗು ಬಳಕೆಯ ಕುರಿತಾಗಿ ಸವಿಸ್ತಾರವಾಗಿ ಮಾಹಿತಿ ನೀಡಿದರು. ಜವಳಗುಂಡಿ ಹಾಲು ಉತ್ಪಾದಕ ಮಹಿಳಾ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಲಲಿತಾ ಶೆಟ್ಟಿ ಮಾತನಾಡಿದರು. ಕಾರ್ಯಕ್ರಮಕ್ಕೆ ತೋಟಗಾರಿಕಾ ಇಲಾಖೆ ಶಿರಸಿ ಹಾಗು ಸ್ಕೊಡ್ ವೆಸ್ ಸಂಸ್ಥೆ ಶಿರಸಿ ವಿಶೇಷ ಸಹಕಾರ ನೀಡಿದ್ದರು. ಟಿ.ಆರ್.ಸಿ. ಸಂಸ್ಥೆಯ ಗಜಾನನ ಹೆಗಡೆ ಸ್ವಾಗತಿಸಿದರು. ಗ್ರೀನ್ ಗ್ರೂಪ್ ಕಂಪನಿ ಮುಖ್ಯಕಾರ್ಯನಿರ್ವಾಹಕ ಗುರುಪ್ರಸಾದ ಶಾಸ್ತ್ರಿ ನಿರ್ವಹಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರು, ಹೈನೋದ್ಯಮಿಗಳು, ರೈತರು ಭಾಗಿಯಾಗಿದ್ದರು‌.

  Share This
  300x250 AD
  300x250 AD
  300x250 AD
  Leaderboard Ad
  Back to top