ಶಿರಸಿ:ಶೈಕ್ಷಣಿಕ ಜಿಲ್ಲೆಯ ಪ್ರಾಥಮಿಕ ಹಾಗೂ ಪೌಢಶಾಲಾ ಶಿಕ್ಷಕರಿಗಾಗಿ ಮೂರು ದಿನಗಳ ಕಾಲ ಜಿಲ್ಲಾಕಛೇರಿ ಶಿರಸಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಭಾರತಸೇವಾದಳ ಉಪಾಧ್ಯಾಯರುಗಳ ಕಾರ್ಯಾಗಾರ ಹಾಗೂ ಕರೋನಾ ಜಾಗೃತಿ ಶಿಬಿರ ಸಮಾರೋಪ ಸಮಾರಂಭದ ಸಮಾರೋಪ ಭಾಷಣ ಹಾಗೂ ಪ್ರಶಸ್ತಿ ಪತ್ರ ವಿತರಣೆಯನ್ನು ಭಾರತ ಸೇವಾದಳ ಜಿಲ್ಲಾ ಸಮಿತಿಯ ಸದಸ್ಯರಾದ ವಿಶ್ರಾಂತ ಪ್ರಾಚಾರ್ಯ, ಕೆ.ಎನ್ ಹೊಸಮನಿಯವರು ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೇವಾದಳದ ಹಿರಿಯ ಕಾರ್ಯಕರ್ತರು ಹಾಗೂ ಅಂತರಾಷ್ಟ್ರೀಯ ಕ್ರೀಡಾಪಟು ಪಿ.ಎನ್. ಜೋಗಳೇಕರರವರು ಅಲಂಕರಿಸಿ, ಕಾರ್ಯಗಾರಕ್ಕೆ ಶುಭಕೋರಿದರು.
ಮೂರು ದಿನಗಳ ಕಾರ್ಯಗಾರದ ಸಮಗ್ರ ವರದಿಯನ್ನು ಭಾರತ ಸೇವಾದಳ ಜಿಲ್ಲಾ ಸಂಘಟಕರಾದ ರಾಮಚಂದ್ರ ಹೆಗಡೆ ವಾಚಿಸಿದರು. ಕಾಯಕ್ರಮದಲ್ಲಿ ಜಿಲ್ಲಾ ಸಮಿತಿಯ ಸದಸ್ಯ ಅಶೋಕ ಭಜಂತ್ರಿರವರು ಹಾಗೂ ಸೇವಾದಳ ಹಿರಿಯ ಸಂಪನ್ಮೂಲ ವ್ಯಕ್ತಿಗಳಾದ ಕುಮಾರ ನಾಯ್ಕಉಪಸ್ಥಿತರಿದ್ದರು.
3 ದಿನಗಳ ಶಿಬಿರದಲ್ಲಿ ಪ್ರಾರ್ಥನೆ, ಯೋಗ, ಸರಳ ಹಾಗೂ ಸಮಾಹಿಕ ವ್ಯಾಯಾಮಗಳು ಸಾಭಿನಯಗೀತೆ, ರಾಷ್ಟ್ರಧ್ವಜ ಮಾಹಿತಿ, ಸಲಕರಣಾ ವ್ಯಾಯಾಮಗಳ ಶಿಕ್ಷಣವನ್ನು 60 ಶಿಬಿರಾರ್ಥಿಗಳು ಪಡೆದುಕೊಂಡರು. ಅಲ್ಲದೆ ಶಿಬಿರದಲ್ಲಿ ವಿಶೇಷವಾಗಿ ಕರೋನಾ ಸಂಬಂಧಿತ ಜಾಗೃತಿ ಹಾಗೂ ಆರೋಗ್ಯ ಸಂಬಂಧಿತ ಉಪನ್ಯಾಸಗಳನ್ನು ಹಮ್ಮಿಕೊಳ್ಳಲಾಗಿತ್ತು. ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ಎಂ. ಎನ್. ಹೆಗಡೆ, ಉದಯಕುಮಾರ ಹೆಗಡೆ, ಸಾವತ್ರಿ ಭಟ್ಟ ಹಾಗೂ ಪ್ಲೋರಾ ಡಿಸೋಜಾ ತಮ್ಮ ಕರ್ತವ್ಯವನ್ನು ನಿರ್ವಹಿಸಿದರು. ರಾಷ್ಟ್ರಧ್ವಜ ಅವರೋಹಣದೊಂದಿಗೆ ಶಿಬಿರವನ್ನು ಮುಕ್ತಾಯ ಗೊಳಿಸಲಾಯಿತು.