ಯಲ್ಲಾಪುರ: ವಸತಿಯೋಜನೆಯಲ್ಲಿ ಸರಕಾರದ ವಿವಿಧ ಇಲಾಖೆಯ ವ್ಯತಿರಿಕ್ತವಾದ ಮಾನದಂಡದಿಂದ ಅರಣ್ಯವಾಸಿಗಳ ವಾಸ್ತವ್ಯಗಳ ಕಟ್ಟಡಗಳಿಗೆ ಆರ್ಥಿಕ ಸಹಾಯ ಪಡೆಯಲು ಉಂಟಾಗುತ್ತಿರುವ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಸೂಚಿಸಬೇಕೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಜಿಲ್ಲಾಡಳಿತಕ್ಕೆ ಅಗ್ರಹಿಸಿತು.
ಇಂದು ಗ್ರಾಮ ವಾಸ್ತವ್ಯಕ್ಕೆ ಸಂಬಂಧಿಸಿ ಯಲ್ಲಾಪುರ ತಾಲೂಕಿನ ಉಮ್ಮಚಗಿ ಗ್ರಾಮ ಪಂಚಾಯತಿಗೆ ಜಿಲ್ಲಾಧಿಕಾರಿ ಮುಲ್ಲ್ಯೆ ಮುಗಿಲನ್ ಭೇಟಿಕೊಟ್ಟಂತ ಸಂದರ್ಭದಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅರಣ್ಯವಾಸಿಗಳ ಪರವಾಗಿ ಅಗ್ರಹಿಸಿದರು.
ಈ ಸಂದರ್ಭದಲ್ಲಿ ‘ಅರಣ್ಯ ವಸತಿದಾರ’ರ ವಸತಿ ಸೌಲಭ್ಯದ ಗೊಂದಲಮಯ ಅರಣ್ಯ, ವಸತಿ, ಜಿ.ಪಂ ಇಲಾಖೆಯ ಆದೇಶಗಳ ಕುರಿತು ಅವರು ದಾಖಲೆಗಳೊಂದಿಗೆ ವಿಶ್ಲೇಷಿಸಿದರು.
ಗೊಂದಲಮಯ ಆದೇಶ : ವಸತಿ ಇಲಾಖೆ ಬೆಂಗಳೂರು, ಅರಣ್ಯ ಪ್ರದೇಶದಲ್ಲಿ ಮನೆ ತೆರಿಗೆ ಪಾವತಿಸುವವರಿಗೆ ಆರ್ಥಿಕ ಸಹಾಯ ನೀಡುತ್ತೇವೆ ಎಂದು ಆದೇಶಿಸಿದರೇ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಲ್ಲಾ ಪಂಚಾಯತ ಕಾರವಾರ ಅವರು ವಸತಿ ಯೋಜನೆಗೆ ಸ್ವಂತ ನಿವೇಶನದ ಹಕ್ಕು ಪತ್ರ ಹೊಂದಿರಬೇಕೆಂಬ ಷರತ್ತು ವಿಧಿಸಿದ್ದಾರೆ. ಅರಣ್ಯ ಅಧಿಕಾರಿಗಳು ಅರಣ್ಯ ಪ್ರದೇಶದಲ್ಲಿ ಯಾವುದೇ ವಸತಿ ಯೋಜನೆ ಮಂಜೂರಿ ಮಾಡಬಾರದು, ಮಾಡಿದಲ್ಲಿ ರದ್ದು ಪಡಿಸಬೇಕು, ಇಲ್ಲದಿದ್ದಲ್ಲಿ ಪಿಡಿಓಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದೆಂಬ ಎಚ್ಚರಿಕೆಯ ಪತ್ರ ನೀಡಿರುತ್ತಾರೆ. ಅರಣ್ಯ ಪ್ರದೇಶದಲ್ಲಿನ ಮನೆ ಕಟ್ಟಿ ಕೊಳ್ಳುವ ಆರ್ಥಿಕ ಸೌಲಭ್ಯದ ಆದೇಶಗಳು ಗೊಂದಲಮಯವಾಗಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಚರ್ಚೆಯ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿಗೆ ಹೇಳಿದರು.