ಕಾರವಾರ: ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಪ್ರತಿ ಗ್ರಾಮೀಣ ಭಾಗಕ್ಕೂ ನಿಗದಿತ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಲು ಸಾರಿಗೆ ಘಟಕದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ವಿ.ಎಸ್.ಪಾಟೀಲ್ ತಿಳಿಸಿದರು.
ಬಸ್ ಸಂಚಾರ ವಂಚಿತ ಶಿರ್ವೆ ಗ್ರಾಮದ ಸಚಿತ್ರ ವರದಿಗೆ ಪ್ರತಿಕ್ರಿಯಿಸಿದ ಅವರು, ದೇವಳಮಕ್ಕಿ ಗ್ರಾ.ಪಂ ವ್ಯಾಪ್ತಿಯ ಶಿರ್ವೆ ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸಲು ಘಟಕ ವ್ಯವಸ್ಥಾಪಕರಿಗೆ ಸೂಚಿಸಿದ್ದೇನೆ. ಯಾವ ಗ್ರಾಮಸ್ಥರೂ ಬಸ್ನಿಂದ ವಂಚಿತರಾಗಬಾರದು. ಸುಸಜ್ಜಿತ ರಸ್ತೆಯಿರುವ ಎಲ್ಲ ಗ್ರಾಮಗಳಿಗೂ ಬಸ್ ಸಂಪರ್ಕ ಕಲ್ಪಿಸುತ್ತಿದ್ದೇವೆ ಎಂದರು.
ಇನ್ನು, ಕಾರವಾರ ಬಸ್ ನಿಲ್ದಾಣದ ವ್ಯವಸ್ಥೆ ಸರಿಯಾಗಿಲ್ಲ. ಖಾಸಗಿ ವಾಹನಗಳಿಗೆ ಪಾಕಿರ್ಂಗ್ ವ್ಯವಸ್ಥೆ ಇಲ್ಲ, ಮಹಿಳೆಯರಿಗಾಗಿ ಪ್ರತ್ಯೇಕ ವಿಶ್ರಾಂತಿ ಕೊಠಡಿ ಇಲ್ಲ ಎನ್ನುವ ಮಾಹಿತಿಗೆ ಪ್ರತಿಕ್ರಿಯಿಸಿ, ಸ್ಥಳೀಯ ಶಾಸಕರ ಜೊತೆ ಈ ಬಗ್ಗೆ ಚರ್ಚಿಸಿ, ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದರು.
ಕದಂಬ ಬಸ್ಗೆ ಕಾರವಾರ ಬಸ್ ನಿಲ್ದಾಣದಲ್ಲಿ ಅವಕಾಶ ನೀಡಲಾಗುತ್ತಿದೆ. ಆದರೆ ಗೋವಾದಲ್ಲಿ ಕರ್ನಾಟಕ ಬಸ್ಗಳಿಗೆ ಒಳಗೆ ಪ್ರವೇಶ ನೀಡುತ್ತಿಲ್ಲ. ಬಸ್ ರಸ್ತೆ ಮೇಲೆ ನಿಲ್ಲುತ್ತದೆ ಎನ್ನುವ ವಿಷಯ ಅಧ್ಯಕ್ಷರ ಗಮನಕ್ಕೆ ಬಂದಾಗ ಈ ಬಗ್ಗೆ ಕ್ರಮಕೈಳ್ಳುವುದಾಗಿ ತಿಳಿಸಿದ ಅವರು, ಎಕ್ಸ್ಪ್ರೆಸ್ ಹೊರತುಪಡಿಸಿ, ಸ್ಥಳೀಯ ಬಸ್ಗಳು ಎಲ್ಲ ನಿಲ್ದಾಣದಲ್ಲೂ ಸ್ಟಾಪ್ ನೀಡಬೇಕು. ಇಲ್ಲವಾದರೆ ಅಂಥ ಚಾಲಕ ಹಾಗೂ ಕಂಡಕ್ಟರ್ಗಳನ್ನು ನಿರ್ದಾಕ್ಷಿಣ್ಯವಾಗಿ ಸಸ್ಪೆಂಡ್ ಮಾಡಲಾಗುವುದು ಎಂದು ಎಚ್ಚರಿಸಿದರು.
ಶೌಚಾಲಯದಲ್ಲಿ ಮೂತ್ರ ವಿಸರ್ಜನೆಗೆ ಹಣ ಪಡೆಯುತ್ತಿರುವ ಬಗ್ಗೆ ಪತ್ರಕರ್ತರು ಅಧ್ಯಕ್ಷರ ಗಮನಸೆಳೆದಾಗ, ಸಾರಿಗೆ ಘಟಕದ ಡಿಸಿ ಜೊತೆ ಮಾತನಾಡಿ, ಮೂತ್ರ ವಿಸರ್ಜನೆ ಉಚಿತ ಎನ್ನುವ ಫಲಕ ಶೌಚಾಲಯದ ಮುಂಭಾಗದಲ್ಲಿ ಹಾಕುವಂತೆ ಸೂಚಿಸಿದರು. ಘಟಕ ವ್ಯವಸ್ಥಾಪಕಿ ಸೌಮ್ಯ ನಾಯಕ ಹಾಗೂ ಇನ್ನಿತರರು ಇದ್ದರು.