ಕಾರವಾರ: ಕೊರೊನಾ ಬಳಿಕವೂ ಸಾರಿಗೆ ಸಂಸ್ಥೆ ನಿರೀಕ್ಷಿತ ಮಟ್ಟದಲ್ಲಿ ಸುಧಾರಿಸಿಕೊಂಡಿಲ್ಲ ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ವಿ.ಎಸ್.ಪಾಟೀಲ್ ತಿಳಿಸಿದರು.
ಕಾರವಾರದ ಬಸ್ ಡಿಪೋಗೆ ಭೇಟಿ ನೀಡಿದ ಅವರು ಕೊರೊನಾ ಲಾಕ್‍ಡೌನ್‍ನಿಂದ ಸಾರಿಗೆ ಸಂಸ್ಥೆ ಸಾಕಷ್ಟು ನಷ್ಟ ಅನುಭವಿಸಿದೆ. ಒಂದು ಕಿ.ಮೀಗೆ 40 ರೂ. ಆದಾಯವಾದರೆ ಮಾತ್ರ ತಕ್ಕ ಮಟ್ಟಿಗೆ ಸುಧಾರಿಸಿಕೊಳ್ಳಬಹುದು. ಇಷ್ಟಾದರೆ ಮಾತ್ರ ನಿರ್ವಹಣೆ, ಸಿಬ್ಬಂದಿಗಳಿಗೆ ವೇತನ ನೀಡಲು ಸಾಧ್ಯ. ಕಳೆದೊಂದು ವಾರದಿಂದ ಕೊಂಚ ಸುಧಾರಿಸಿಕೊಂಡಿದೆ. ಆದರೆ ಈಗ ಪತ್ರಿ ಕಿ.ಮಿ.ಗೆ 29 ರಿಂದ 30 ರೂ.ಬರುತ್ತಿದೆ. ಇನ್ನೂ ನಿರೀಕ್ಷಿತ ಮಟ್ಟದಲ್ಲಿ ಸುಧಾರಿಸಿಕೊಂಡಿಲ್ಲ. ಮೂರು ವರ್ಷದಿಂದ ಯಾವುದೇ ನೂತನ ಬಸ್ ಖರೀದಿ ಮಾಡಿಲ್ಲ. ಈ ಹಿಂದೆ 17 ಲಕ್ಷ ಕಿ.ಮೀ ದಿನನಿತ್ಯ ಬಸ್ ಓಡಿಸುತ್ತಿದ್ದೆವು. ಈ ಅವಧಿಯಲ್ಲಿ 22 ಲಕ್ಷ ಪ್ರಯಾಣಿಕರು ಓಡಾಡುತ್ತಿದ್ದರು. ಈಗ 14.50 ಲಕ್ಷ ಕಿ.ಮೀ ಮಾತ್ರ ಓಡಿಸುತ್ತಿದ್ದೇವೆ. 15 ಲಕ್ಷದವರೆಗೆ ಪ್ರಯಾಣಿಕರು ಓಡಾಡುತ್ತಿದ್ದಾರೆ. 4800 ಬಸ್‍ಗಳಲ್ಲಿ ಈಗಾಗಲೇ ಶೇ.50ಷ್ಟು ಓಡಿದ ಹಳೆಯ ಬಸ್‍ಗಳೇ ಇವೆ. ಬೋರ್ಡ್ ಮೀಟಿಂಗ್‍ನಲ್ಲಿ ಇಲೆಕ್ಟ್ರಿಕಲ್ ಬಸ್ ತೆಗೆದುಕೊಳ್ಳಬೇಕು ಎಂದು ನಿರ್ಧಾರ ಮಾಡಲಾಗಿತ್ತು. ಆದರೆ ಕಿ.ಮೀಗೆ 56 ರೂ. ಖರ್ಚು ಆಗುವುದರಿಂದ ಬೇಡ ಎನ್ನುವ ನಿರ್ಧಾರ ಕೈಗೊಳ್ಳಲಾಗಿತ್ತು.
ಆದರೆ ಇಲೆಕ್ಟ್ರಿಕಲ್ ಬಸ್ ಈಗ ಅನಿವಾರ್ಯವಾಗಿದೆ. ಕೇಂದ್ರ ಸರಕಾರದಿಂದ 80 ಲಕ್ಷ ರೂ. ಸಬ್ಸಿಡಿ ಲಭಿಸುತ್ತದೆ. ಅದಕ್ಕೂ ಪರವಾನಗಿ ಕೇಳಿದ್ದೇವೆ. ಬಜೆಟ್‍ನಲ್ಲೂ ಶಾಸಕರಿಗೆ ಹೇಳಿದ್ದೇವೆ. ಅನುದಾನ ನೀಡಿದರೆ ಮಾತ್ರ ಬಸ್ ಖರೀದಿ ಮಾಡುತ್ತೇವೆ. ಸಿಟಿಯೊಳಗೆ ಇಲೆಕ್ಟ್ರಿಕಲ್ ಬಸ್ ತೆಗೆದುಕೊಳ್ಳುವ ಬಗ್ಗೆ ನಿರ್ಧರಿಸಲಾಗಿದ್ದು, 50 ಬಸ್ ತೆಗೆದುಕೊಳ್ಳುವ ಬಗ್ಗೆ ಠರಾವು ಮಾಡಿದ್ದೇವೆ. ಚಾಲಕರು, ನಿರ್ವಾಹಕರು, ಸಿಬ್ಬಂದಿಗಳು ನಿವೃತ್ತಿಯಾಗಿದ್ದರಿಂದ ಹೊಸ ಸಿಬ್ಬಂದಿಗಳ ನೇಮಕ ಮಾಡಲು ಕ್ರಮಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಸಾರಿಗೆ ಮಂತ್ರಿಗಳ ಜೊತೆಗೆ ಮಾತನಾಡಿದ್ದೇವೆ. ಈಗಾಗಲೇ ಸಂಸ್ಥೆ ನಷ್ಟದಲ್ಲಿದ್ದು, ಆದರೂ ಜನ ಸೇವೆ ಮಾಡಬೇಕಾಗಿದ್ದು ಅನಿವಾರ್ಯವಾಗಿದೆ. ಇನ್ನು ಮುಂದೆ ಪರವಾನಗಿ ಪಡೆದು ಸಿಬ್ಬಂದಿಗಳನ್ನು ನೇಮಕ ಮಾಡುತ್ತೇವೆ. ಮುಖ್ಯವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲೇ ಚಾಲಕರು, ನಿರ್ವಾಹಕರ ಕೊರತೆ ಹೆಚ್ಚಿದೆ. ಶೀಘ್ರವೇ ನೇಮಕ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದರು.
ಕೆ.ಎಸ್.ಆರ್.ಟಿ.ಸಿ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳು ನಷ್ಟದಲ್ಲಿದೆ. ಆದರೆ ಸರಕಾರ ಸಿಬ್ಬಂದಿಗಳಿಗೆ ವೇತನ ನೀಡುವ ವ್ಯವಸ್ಥೆ ಮಾಡಿ, ನಾಲ್ಕು ತಿಂಗಳು ಪೂರ್ಣ ವೇತನ ಹಾಗೂ ಶೇ.50ರಷ್ಟು ನೀಡಿದರು. ಈಗಾಗಲೇ ನಿವೃತ್ತಿಯಾದವರಿಗೆ 1 ಸಾವಿರ ಕೋಟಿ ರೂ. ನೀಡುವುದು ವಾಯುವ್ಯ ಕರ್ನಾಟದಿಂದ ಬಾಕಿ ಇದೆ. ಸಾರಿಗೆ ಮಂತ್ರಿಗಳಿಗೆ, ಮುಖ್ಯಮಂತ್ರಿಗಳಿಗೆ ಈ ಬಗ್ಗೆ ಮಾತನಾಡಿದ್ದೇವೆ. ಈ ಬಗ್ಗೆ ಕ್ರಮಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಹ ಭರವಸೆ ನೀಡಿದ್ದಾರೆ.
ವಾಯುವ್ಯ ಕರ್ನಾಟಕದಲ್ಲಿ ನಿತ್ಯ 4 ಕೋಟಿ ರೂ. ಸದ್ಯ ಬರುತ್ತಿದೆ. ಇದರಲ್ಲಿ 2.50 ಕೋಟಿ ರೂ.ಡಿಸೆಲ್‍ಗೆ ಬೇಕು. ಒಂದು ವಾರದ ಅವಧಿಯಿಂದ 4 ಕೋಟಿಗೂ ಅಧಿಕ ಕಲೆಕ್ಷನ್ ಬರುತ್ತಿದೆ. 2 ಕೋಟಿ ರೂ. ಉಳಿಯುತ್ತಿದೆ ಎಂದರು.