ಹೊನ್ನಾವರ : ತಾಲೂಕಿನ ಗೇರುಸೊಪ್ಪಾದ ನಿವಾಸಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ವಿನಾಯಕ ನಾಯ್ಕ ಅವರಿಗೆ ಹೊನ್ನಾವರ ಲಯನ್ಸ್ ಕ್ಲಬ್ ವತಿಯಿಂದ 55 ಸಾವಿರ ಧನಸಹಾಯ ನೀಡುವ ಮೂಲಕ ಮಾನವೀಯತೆ ಮೆರೆದರು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಖಜಾಂಚಿ ಎಸ್.ಜೆ.ಕೈರನ್ ಮಾತನಾಡಿ, ಹಲವು ಸಮಾಜಮುಖಿ ಕಾರ್ಯದ ಮೂಲಕ ಜನಮನ್ನಣೆ ಪಡೆದಿರುವ ನಮ್ಮ ಲಯನ್ಸ್ ಸಂಸ್ಥೆಯ ಇಂತಹ ಕಾರ್ಯ ಪ್ರಚಾರಕ್ಕೆ ಅಲ್ಲದಿದ್ದರೂ ಇನ್ನೊಬ್ಬರು ಸಹಾಯ ಮಾಡಲು ಪ್ರೇರಣೆಯಾಗಲಿ ಎನ್ನುವ ಉದ್ದೇಶವಾಗಿದೆ. ಹಲವು ವರ್ಷದಿಂದ ಇಂತಹ ಸಮಾಜ ಸೇವಾ ಕಾರ್ಯಕ್ರಮ ನಡೆಸುತ್ತಿದೆ. ಲಯನ್ಸ ಸದಸ್ಯರು ಹಾಗೂ ದಾನಿಗಳ ಸಹಕಾರದ ಮೇರೆಗೆ ಇಂತಹ ಕಾರ್ಯಗಳು ಹೆಚ್ಚು ನಡೆಯುತ್ತಿದೆ ಎಂದು ಹೇಳಿದರು. ಒರ್ವ ವ್ಯಕ್ತಿಗೆ ಇಷ್ಟು ಮೊತ್ತದ ಹಣ ನೀಡಿರುವುದು ಪ್ರಥಮವಾಗಿದೆ. ಯುವಕನಾಗಿರುವುದರಿಂದ ಅವನ ಭವಿಷ್ಯ ಉಜ್ವಲವಾಗಬೇಕು ಎನ್ನುವುದು ನಮ್ಮೆಲ್ಲರ ಹಾರೈಕೆಯಾಗಿದೆ.
ಲಯನ್ಸ್ ಕ್ಲಬ್ ಅಧ್ಯಕ್ಷ ವಿನೋದ ನಾಯ್ಕ ಮಾವಿನಹೊಳೆ ಮಾತನಾಡಿ, ನಾನು ಗ್ರಾಮೀಣ ಪ್ರದೇಶದವನಾಗಿರುವುದರಿಂದ ಈ ಬಾರಿ ಗ್ರಾಮೀಣ ಭಾಗದಲ್ಲಿ ಹಲವು ಕಾರ್ಯಕ್ರಮ ಆಯೋಜಿಸಿ ನೆರವಾಗುತ್ತಿದ್ದೇವೆ. ಶೈಕ್ಷಣಿಕವಾಗಿ ಶಾಲೆಗೆ ಪೀಠೋಪಕರಣ ನೀಡುವ ಮೂಲಕ ಉತ್ತೇಜನ ನೀಡಿದ್ದೇವೆ. ತಂದೆಯನ್ನು ಕಳೆದುಕೊಂಡ ಯುವಕ ಕಿಡ್ನಿ ಸಮಸ್ಯೆಯಿಂದ ಅನಾರೋಗ್ಯದಿಂದಿದ್ದು ಅವರ ತಾಯಿಯೆ ಮಗನಿಗೆ ಕಿಡ್ನಿ ನೀಡುವ ತ್ಯಾಗಕ್ಕೆ ಮುಂದಾಗಿದ್ದಾರೆ. ತಿರಾ ಬಡಕುಟುಂಬವಾಗಿದೆ. ಈ ವಿಷಯ ನಮ್ಮ ಗಮನಕ್ಕೆ ಬಂದಾಗ ಎಲ್ಲಾ ಸದಸ್ಯರು ಒಮ್ಮನಸಿನಿಂದ ಕೂಡಿ ಇಂತಹ ಸಂದರ್ಭದಲ್ಲಿ ಆರ್ಥಿಕ ನೆರವಾಗುವ ಅಗತ್ಯತೆಯ ದೃಷ್ಟಿಯಿಂದ ಸಹಾಯ ಮಾಡಲಾಗಿದೆ ಎಂದರು.
ಲಯನ್ಸ್ ಕ್ಲಬ್ ಕಾರ್ಯದರ್ಶಿ ಉದಯ ನಾಯ್ಕ, ಸದಸ್ಯರಾದ ರಾಜೇಶ ಸಾಲೆಹಿತ್ತಲ್, ಎ.ವಿ.ಶ್ಯಾನಭಾಗ ಮತ್ತಿತರರು ಹಾಜರಿದ್ದರು.