ಕಾರವಾರ: ಯುವ ಜನರು ಶಿಕ್ಷಣ ಪೂರೈಸಿದ ನಂತರ ಕೆಲಸ ಹುಡುಕುವ ಬದಲು ಅವರೇ ಉದ್ಯಮ ಸ್ಥಾಪಿಸಿ ಇತರರಿಗೆ ಉದ್ಯೋಗ ನೀಡುವಂತಾಗಬೇಕೆಂಬ ನಿಟ್ಟಿನಲ್ಲಿ ಯುವ ಜನರಿಗೆ ಎಲ್ಲ ಅಗತ್ಯ ಮಾಹಿತಿ ಒದಗಿಸಲು ಕೈಗಾರಿಕಾ ಇಲಾಖೆಯ ವತಿಯಿಂದ ಬೆಳಗಾವಿಯಲ್ಲಿ ಫೆ.19 ರಂದು ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ‘ಉದ್ಯಮಿಯಾಗು ಉದ್ಯೋಗ ನೀಡು’ ಕಾರ್ಯಾಗಾರ ಆಯೋಜಿಸಲಾಗಿದೆ.
ಅದೇ ರೀತಿ ಉದ್ಯಮಿಗಳ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೈಗಾರಿಕಾ ಇಲಾಖೆಯು ಬೆಳಗಾವಿ ವಿಭಾಗದಲ್ಲಿ ಅದೇ ದಿನದಂದು ಮಧ್ಯಾಹ್ನ 3.30ಕ್ಕೆ ‘ಕೈಗಾರಿಕಾ ಅದಾಲತ್’ ಕಾರ್ಯಕ್ರಮ ಹಮ್ಮಿಕೊಂಡಿದೆ.
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಡಾ. ಎಪಿಜೆ ಅಬ್ದುಲ್ ಕಲಾಂ ಆಡಿಟೋರಿಯಂನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ. ಮುರುಗೇಶ್ ಆರ್ ನಿರಾಣಿ ರವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ಕೂಡ ವೀಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಬಹುದಾಗಿದ್ದು, ಅದಕ್ಕೆ ಪೂರಕ ವ್ಯವಸ್ಥೆಯನ್ನು ಜಿಲ್ಲಾ ರಂಗಮಂದಿರ ಹಾಗೂ ಶಿರಸಿ ವಿದ್ಯಾನಗರದ ಎಮ್.ಇ.ಎಸ್ ಕಾಲೇಜ ರಜತ ಸಭಾ ಭವನದಲ್ಲಿ ಬೆಳಿಗ್ಗೆ 9. 30 ರಿಂದ ಕಾರ್ಯಕ್ರಮ ಮುಕ್ತಾಯವಾಗುವರೆಗೂ ಕಲ್ಪಿಸಲಾಗಿರುತ್ತದೆ.
ಕಾಲೇಜಿನ ಮುಖ್ಯಸ್ಥರು ಈ ಕಾರ್ಯಕ್ರಮದಲ್ಲಿ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳು ಭಾಗವಹಿಸಲು ಅನುಕೂಲ ಕಲ್ಪಿಸಲು, ಕೈಗಾರಿಕೋದ್ಯಮಿಗಳು, ವಿವಿಧ ಕೈಗಾರಿಕೆ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಈ ‘ಕೈಗಾರಿಕಾ ಅದಾಲತ್’ನಲ್ಲಿ ಭಾಗವಹಿಸಿ, ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಲು ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ , ಶಿರವಾಡ, ಕಾರವಾರ ಇವರ ದೂರವಾಣಿ ಸಂಖ್ಯೆ 08382-282302 ಗೆ ಸಂಪರ್ಕಿಸಲು ಪ್ರಕಟಣೆಯು ತಿಳಿಸಿದೆ.
ಕುಮಟಾ ತಾಲೂಕು ನ್ಯಾಯಾಲಯದಲ್ಲಿ ದಾಖಲಾಗಿರುವ ವಿವಿಧ ಪ್ರಕರಣಗಳನ್ನು ಬಗೆಹರಿಸುವ ಉದ್ದೇಶದಿಂದ ಮಾರ್ಚ್ 12 ರಂದು ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಕಾಶ ನಾಯಕ್, ಪ್ರಧಾನ ಸಿವಿಲ್ ನ್ಯಾಯಾಧೀಶ ನರೇಂದ್ರ ಬಿ ಆರ್ ಅವರನ್ನು ಒಳಗೊಂಡ ತಾಲೂಕು ಕಾನೂನು ಸೇವಾ ಸಮಿತಿ ತಿಳಿಸಿದೆ.
ಲೋಕ ಅದಾಲತ್ ನಲ್ಲಿ ದೌರ್ಜನ್ಯ, ನಷ್ಟ ಪರಿಹಾರ ಕುರಿತು ತಕರಾರುಗಳು, ಮೋಟಾರ್ ವೆಹಿಕಲ್,ಬ್ಯಾಂಕುಗಳ ಸಾಲ ವಸೂಲಿ, ಸಿವಿಲ್ ವ್ಯಾಜ್ಯಗಳು, ಚೆಕ್ ಬೌನ್ಸ್ ಪ್ರಕರಣ ಸೇರಿದಂತೆ ವಿವಿಧ ಬಗೆಯ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ಅವಕಾಶವಿದ್ದು, ಕಕ್ಷಿದಾರರಿಗೆ ಖರ್ಚಿಲ್ಲದೇ ತ್ವರಿತವಾಗಿ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ ಎಂದು ಪ್ರಕಟಣೆಯು ತಿಳಿಸಿದೆ.