• Slide
    Slide
    Slide
    previous arrow
    next arrow
  • ವಿಜೃಂಭಣೆಯಿಂದ ನಡೆದ ಮಾರ್ಕೆಪೂನವ್ ಜಾತ್ರೆ

    300x250 AD

    ಕಾರವಾರ:ತಾಲೂಕಿನ ಗ್ರಾಮೀಣ ಭಾಗವಾಗಿರುವ ಮಾಜಾಳಿ, ಅಸ್ನೋಟಿ, ಮುಡಗೇರಿಯಲ್ಲಿ ಮಾರ್ಕೆಪೂನವ್ ಜಾತ್ರೆ ಪ್ರತಿ ವರ್ಷ ಜರುಗುತ್ತಿದ್ದು,ಗುರುವಾರ ಸಡಗರ ಹಾಗು ವಿಜೃಂಭಣೆಯಿಂದ ಜಾತ್ರೆ ನಡೆಯಿತು.

    ಜಾತ್ರೆಯಲ್ಲಿ ಒಂದೊಂದು ಕಡೆ ಒಂದೊಂದು ರೀತಿಯ ಆಚರಣೆ ಇರುತ್ತದೆ. ಹಾಗೆಯೇ ಮಾರ್ಕೆ ಪೂನವ್ ಜಾತ್ರೆ ಭಿನ್ನ ವಿಭಿನ್ನ ಸಂಪ್ರದಾಯಗಳಿಂದಾಗಿ ಇಲ್ಲಿನ ಆಚರಣೆಗಳೂ ವಿಶಿಷ್ಟವಾಗಿವೆ. ಜಾತ್ರೆಯಲ್ಲಿ ಗಂಡು ಮಕ್ಕಳು ಹೊಕ್ಕಳ ಬಳಿ ಸೂಜಿ ಚುಚ್ಚಿಸಿಕೊಂಡು ನೂಲನ್ನು ಪೋಣಿಸಿಕೊಳ್ಳುವ ಹಾಗೂ ಹೆಣ್ಣುಮಕ್ಕಳು ದೀಪವನ್ನು ಹೊತ್ತು ಹರಕೆಯನ್ನು ಈಡೇರಿಸುವ ಮೂಲಕ ಸಂಪ್ರದಾಯವನ್ನು ಆಚರಿಸುವುದು ಈ ಜಾತ್ರೆಯ ವಿಶೇಷ.

    ಪ್ರತಿವರ್ಷ ಮಾಜಾಳಿ ಗ್ರಾಮದ ಧಾಡ್ ದೇವರ ದೇವಸ್ಥಾನದ ಬಳಿ ನಡೆಯುವ ಈ ಜಾತ್ರೆಯಲ್ಲಿ ಯುವಕರು ಸೂಜಿ ಚುಚ್ಚಿಸಿಕೊಳ್ಳುವ ಮೂಲಕ ದೇವರಿಗೆ ಹರಕೆಯನ್ನ ಸಲ್ಲಿಸುತ್ತಾರೆ. ಪ್ರೌಢಾವಸ್ಥೆಯ ಪೂರ್ವದಲ್ಲಿ ಗಂಡು ಮಕ್ಕಳು ಹೊಕ್ಕಳ ಬಳಿ ದಾರ ಪೋಣಿಸಿಕೊಳ್ಳುವುದರಿಂದ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇಲ್ಲಿನ ಜನರಲ್ಲಿದೆ. ಅಲ್ಲದೇ ಮುಂದೆ ಜೀವನದಲ್ಲಿ ಎಂತಹ ಕಷ್ಟಗಳು ಬಂದರೂ ಧೈರ್ಯವಾಗಿ ಎದುರಿಸಲು ಇದರಿಂದ ಸಹಾಯವಾಗುತ್ತದೆ ಎನ್ನುವ ನಂಬಿಕೆ ಇರುವುದರಿಂದ ಮದುವೆಗೂ ಮೊದಲು ಯುವಕರು ಮತ್ತು ಮಕ್ಕಳು ಸೂಜಿ ಚುಚ್ಚಿಸಿಕೊಳ್ಳುವುದು ಇಲ್ಲಿನ ವಾಡಿಕೆಯಾಗಿದೆ. ಈ ರೀತಿ ಮಾಡಿದಲ್ಲಿ ಮುಂದೆ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಎದುರಾಗುವುದಿಲ್ಲ ಅನ್ನೋ ನಂಬಿಕೆ ಇಲ್ಲಿನವರದ್ದು. ಈ ಸಂಪ್ರದಾಯ ಹಿಂದಿನಿಂದಲೂ ರೂಢಿಯಲ್ಲಿದ್ದು ಈ ಬಾರಿ ಸುಮಾರು 10ಕ್ಕೂ ಅಧಿಕ ಪುರುಷರು ಹಾಗೂ ಮಕ್ಕಳು ಅರ್ಚಕರಿಂದ ದಾರ ಪೋಣಿಸಿಕೊಂಡು ಹರಕೆ ಅರ್ಪಿಸಿದರು.

    300x250 AD

    ದಾಡ್ ದೇವರ ದೇವಸ್ಥಾನದಿಂದ ಸುಮಾರು ಒಂದು ಕಿಲೋ ಮೀಟರ್ ದೂರವಿರುವ ದೇವತಿ ದೇವಿಯ ದೇವಸ್ಥಾನದ ಬಳಿ ಹರಕೆ ಹೊತ್ತವರು ಕನಕಾಂಬರ ಹೂವಿನಿಂದ ಸಿಂಗಾರಗೊಂಡ ಬಂಡಿಯೊಂದಿಗೆ ತೆರಳುತ್ತಾರೆ. ಸೂಜಿ ದಾರ ಪೋಣಿಸಿಕೊಂಡವರು ಆ ದೇವಸ್ಥಾನದ ಬಳಿ ತೆರಳಿ ಅಲ್ಲಿ ದಾರವನ್ನ ತೆಗೆಸಿಕೊಂಡ ಬಳಿಕ ಅವರ ಹರಕೆ ತೀರಿದಂತಾಗುತ್ತದೆ. ಗ್ರಾಮದ ಯುವತಿಯರು, ಸೊಸೆಯಾಗಿ ಗ್ರಾಮಕ್ಕೆ ಬಂದ ಸ್ತ್ರೀಯರು ಹಾಗೂ ಹರಕೆ ಹೊತ್ತುಕೊಂಡ ಮಹಿಳೆಯರು ದೀಪ ಸೇವೆಯನ್ನ ನೀಡುತ್ತಾರೆ. ತಮ್ಮ ತಲೆಯ ಮೇಲೆ 5 ಬತ್ತಿಯಿರುವ ದೀಪವನ್ನ ಹೊತ್ತುಕೊಂಡು ದಾಡ್ ದೇವಸ್ಥಾನದಿಂದ ದೇವತಿದೇವಿ ದೇವಸ್ಥಾನದವರೆಗೆ ಬಿಸಿಲಿನಲ್ಲೇ ಕಾಲ್ನಡಿಗೆಯಲ್ಲಿ ಸಾಲಾಗಿ ಸಂಚರಿಸುತ್ತಾರೆ. ಬಳಿಕ ಅಲ್ಲಿನ ದೇವತೆಗೆ ತಾವು ಹೊತ್ತು ತಂದ ದೀಪವನ್ನು ತೂಗಿ ಭಕ್ತಿಯಿಂದ ನಮಸ್ಕರಿಸಿ ದೀಪಗಳನ್ನ ಅಲ್ಲಿಯೇ ಇಟ್ಟು ಮರಳುತ್ತಾರೆ. ಪುರಾತನ ಕಾಲದಿಂದ ನಡೆದು ಬರುತ್ತಿರುವ ಈ ಜಾತ್ರೆಗೆ ಗೋವಾ, ಮಹಾರಾಷ್ಟ್ರ, ಮುಂಬೈ ಸೇರಿದಂತೆ ವಿವಿಧೆಡೆಯಿಂದ ಭಕ್ತರು ಬರುತ್ತಾರೆ. ಈ ಬಾರಿ ಕೊರೊನಾ ಕಾರಣದಿಂದ ಭಕ್ತರ ಸಂಖ್ಯೆ ಕೊಂಚ ಇಳಿಕೆಯಾಗಿದೆ.

    ಒಂದೊಂದು ಕಡೆ ನಡೆಯುವ ಜಾತ್ರೆಗಳೂ ವಿಭಿನ್ನ ಆಚರಣೆಯ ವಿಶೇಷತೆಯನ್ನು ಹೊಂದಿದ್ದು ಗುರುವಾರ ಕಾರವಾರ ತಾಲೂಕಿನ ಮಾಜಾಳಿಯಲ್ಲಿ ನಡೆದ ಮಾರ್ಕೆಪೂನವ್ ಜಾತ್ರೆ ಸಾಕಷ್ಟು ವಿಶಿಷ್ಟತೆಗಳಿಂದ ಕೂಡಿದೆ. ವಿವಿಧೆಡೆಗಳಿಂದ ಜಾತ್ರೆಗೆ ಆಗಮಿಸಿದ್ದ ಸಾವಿರಾರು ಮಂದಿ ಭಕ್ತರು ತಮ್ಮ ಹರಕೆಯನ್ನ ತೀರಿಸಿ ದೇವರ ದರ್ಶನ ಪಡೆದು ಧನ್ಯರಾದರು.

    Share This
    300x250 AD
    300x250 AD
    300x250 AD
    Leaderboard Ad
    Back to top