ಅಂಕೋಲಾ : ಹಾಲಕ್ಕಿ ಸಮಾಜದ ಯುವಕರು ಸದೃಢರು ಹಾಗೂ ಪರಿಶ್ರಮಿಗಳು. ಆರ್ಥಿಕವಾಗಿ ಹಿಂದುಳಿದರೂ ಕ್ರೀಡೆ ಮತ್ತು ಸಂಸ್ಕ್ರತಿಯಲ್ಲಿ ಶ್ರೀಮಂತರು ಎಂದು ಅಂಕೋಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾಂಡುರಂಗ ಗೌಡ ಹೇಳಿದರು.
ಅವರು ತಾಲೂಕಿನ ಶೆಡಗೇರಿ ಹುಲಿದೇವರವಾಡ ಗೆಳೆಯರ ಬಳಗದ ಆಶ್ರಯದಲ್ಲಿ ಜೈಹಿಂದ್ ಮೈದಾನದಲ್ಲಿ ಆಯೋಜಿಸಿದ 5 ನೇ ವರ್ಷದ ಹಾಲಕ್ಕಿ ಸಮಾಜದ ತಾಲೂಕ ಮಟ್ಟದ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಹಾಲಕ್ಕಿ ಸಮಾಜದ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿ ಬೇರೆ ಬೇರೆ ಹಳ್ಳಿಗಳ ಯುವಕರನ್ನು ಒಂದೆಡೆ ಕೂಡಿಸಿ ಸಾಮರಸ್ಯತೆ ಮೂಡಿಸುತ್ತಿರುವದು ಶ್ಲಾಘನೀಯ, ಅಂಕೋಲೆಯ ಎರಡು ಮುತ್ತುಗಳಾದ ಜಾನಪದ ಕೋಗಿಲೆ ಪದ್ಮಶ್ರೀ ಸುಕ್ರಿ ಗೌಡ ಮತ್ತು ವೃಕ್ಷಮಾತೆ ಪದ್ಮಶ್ರೀ ತುಳಸೀ ಗೌಡರನ್ನು ಸನ್ಮಾನಿಸುತ್ತಿರುವದು ತುಂಬ ಖುಷಿ ಕೊಟ್ಟಿದೆ ಎಂದರು.
ತಾಲೂಕ ಹಾಲಕ್ಕಿ ಸಮಾಜದ ಅಧ್ಯಕ್ಷ ಮಂಗು ಗೌಡ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಕಳೆದ 5 ವರ್ಷಗಳಿಂದ ಹಾಲಕ್ಕಿ ಸಮಾಜದವರು ಈ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸುತ್ತ ಬಂದಿದ್ದು ಹೆಮ್ಮೆಯ ವಿಷಯವಾಗಿದೆ. ಹಾಲಕ್ಕಿ ಸಮಾಜದ ಯುವಕರಿಗೆ ಪ್ರೋತ್ಸಾಹ ನೀಡಬೇಕು ಎಂದರು.
ವೇದಿಕೆಯಲ್ಲಿ ತುಳಸೀ ಗೌಡರನ್ನು ಸನ್ಮಾನಿಸಿ ಗೌರವಿಸಲಾಯಿತು.
ಹುಲಿದೇವರವಾಡ ಗೆಳೆಯರ ಬಳಗದ ಅಧ್ಯಕ್ಷ ಗುರು ಗೌಡ, ಊರ ಗೌಡರಾದ ಅರುಣ ಗೌಡ, ಛೋಟು ಬೇಕರಿ ಮಾಲಕ ಜೀವನ ನಾಯಕ, ಹಿರಿಯರಾದ ಸೋಮ ಗೌಡ, ಅಗಸೂರು ಗ್ರಾ.ಪಂ. ಸದಸ್ಯ ಯಶ್ವಂತ ಗೌಡ ಉಪಸ್ಥಿತರಿದ್ದು ಪಂದ್ಯಾವಳಿಗೆ ಶುಭ ಹಾರೈಸಿದರು.
ಪದ್ಮಶ್ರೀ ತುಳಸೀ ಗೌಡ ಹೊನ್ನಳ್ಳಿ ಕ್ರೀಡಾಂಗಣವನ್ನು ಉದ್ಘಾಟಿಸಿದರು. ಶೇಖರ ಗೌಡ ಕಾರ್ಯಕ್ರಮವನ್ನು ನಿರ್ವಹಿಸಿದರು. ಟೂರ್ನಿಯಲ್ಲಿ ಒಟ್ಟೂ 40 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ.