ಶಿರಸಿ :ರಾಜ್ಯದ ಅತಿದೊಡ್ಡ ಜಾತ್ರೆಗಳಲ್ಲೊಂದಾದ ಶಿರಸಿಯ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಯು ಮಾ.15 ರಿಂದ 23 ರ ವರೆಗೆ ನಡೆಯಲಿದ್ದು, ಜಾತ್ರೆಯ ಅಧಿಕೃತ ಆಮಂತ್ರಣ ಪತ್ರಿಕೆಯನ್ನು ಶುಕ್ರವಾರ ಬಿಡುಗಡೆ ಮಾಡಲಾಯಿತು.
ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಆರ್.ಜಿ.ನಾಯ್ಕ, ಉಪಾಧ್ಯಕ್ಷ ಸುದೇಶ ಜೋಗಳೇಕರ ಹಾಗೂ ಧರ್ಮದರ್ಶಿಗಳಾದ ಸುಧೀರ ಹಂದ್ರಾಳ, ವತ್ಸಲಾ ಹೆಗಡೆ, ಶಿವಾನಂದ ಶೆಟ್ಟಿ ಇವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ನಂತರ ಅಧ್ಯಕ್ಷ ಆರ್.ಜಿ.ನಾಯ್ಕ ಮಾತನಾಡಿ ಜಾತ್ರೆಗೆ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದ್ದು , ಕೋವಿಡ್ ನಿಯಮಗಳನ್ನು ಎಲ್ಲರೂ ಖಡ್ಡಾಯವಾಗಿ ಪಾಲಿಸಿ , ಸಾಮಾಜಿಕ ಅಂತರ ಕಾಪಾಡಿಕೊಂಡು ಹೆಚ್ಚಿನ ಭಕ್ತರು ಜಾತ್ರೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಫಾಲ್ಗುಣ ಶುದ್ಧ ಅಷ್ಟಮಿ ಮಾ.15 ರಂದು ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಕಲ್ಯಾಣ ಪ್ರತಿಷ್ಠೆ ರಾತ್ರಿ ೧೧.೧೭ ರಿಂದ ೧೧.೨೭ ರೊಳಗೆ ಸಭಾಮಂಟಪದ ರಂಗ ಮಂಟಪದಲ್ಲಿ ನಡೆಯಲಿದೆ. ನಂತರ ರಾಜೋಪಚಾರದಿ ವಿನಿಯೋಗಗಳು ರಾತ್ರಿ ೧೧.೨೭ ರ ನಂತರ ನಡೆಯಲಿದ್ದು, ಮಾ.೧೬ ತ್ರಯೋದಶಿಯಂದು ಬೆಳಿಗ್ಗೆ ೭.೦೩ ರಿಂದ ರಥೋತ್ಸವ ಆರಂಭವಾಗಿ ಮಧ್ಯಾಹ್ನ ೧೨.೪೫ ರಿಂದ ೧೨.೫೭ ರ ಒಳಗೆ ಬಿಡಕಿ ಬೈಲಿನ ಜಾತ್ರಾ ಸ್ಥಳದ ಪೀಠದಲ್ಲಿ ಸ್ಥಾಪನೆ ಆಗಲಿದೆ ಎಂದರು.
ಫಾಲ್ಗುಣ ಕೃಷ್ಣ ಷಷ್ಠಿಯ ಮಾ.೨೩ ರಂದು ಜಾತ್ರೆ ಮುಕ್ತಾಯದ ಕಾರ್ಯಕ್ರಮಗಳು ನಡೆಯಲಿದ್ದು, ಅಂದು ಬೆಳಿಗ್ಗೆ ೯ ಗಂಟೆಯವರೆಗೆ ಮಾತ್ರ ಸೇವೆ ಸ್ವೀಕಾರ ಮಾಡಲಾಗುವುದು ಎಂದು ತಿಳಿಸಿದರು.
ಜಾತ್ರೆಯ ಸಂದರ್ಭದಲ್ಲಿ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿದ್ದು, ಭಕ್ತರಿಗೆ ಯಾವುದೇ ತೊಂದರೆಗಳಾಗದಂತೆ ಪೆಂಡಾಲ್ ವ್ಯವಸ್ಥೆ ಮಾಡಲಾಗಿದ್ದು, ದಣಿವವನ್ನು ನೀಗಿಸಲು ಪಾನಕ ಸಹ ನೀಡಲಾಗುವುದು. ಹೀಗೆ ಭಕ್ತರ ಅನುಕೂಲಕ್ಕೆ ಬೇಕಾದ ಎಲ್ಲಾ ಕ್ರಮ ಕೈಗೊಳ್ಳಲಾಗಿದ್ದು, ಸಕಲ ವ್ಯವಸ್ಥೆಯೊಂದಿಗೆ ಜಾತ್ರೆ ನಡೆಸಲಾಗುವುದು ಎಂದು ಆರ್.ಜಿ.ನಾಯ್ಕ ಹೇಳಿದರು.
ಸೇವೆಗಳ ವಿವರ :
ಮಾ.೧೭ ರಿಂದ ೨೨ ರವರೆಗೆ ಹಣ್ಣು – ಕಾಯಿ, ಕಾಣಿಕೆ, ಹರಕೆ, ತುಲಾಭಾರ ಸೇರಿದಂತೆ ಎಲ್ಲಾ ಸೇವೆಗಳು ಬೆಳಿಗ್ಗೆ ೫ ರಿಂದ ರಾತ್ರಿ ೧೦ ಗಂಟೆಯವರೆಗೆ ನಡೆಯಲಿದೆ. ಮರ್ಕಿ – ದುರ್ಗಿ ದೇವಸ್ಥಾನದಲ್ಲಿ ಬೇವಿನ ಉಡಿಗೆ ಸೇವೆ ಬೆಳಿಗ್ಗೆ ೬ ರಿಂದ ಸಂಜೆ ೫ ಗಂಟೆಯವರೆಗೆ ನಡೆಯಲಿದೆ.
ಫೆ.೨೨ ರಂದು ಮೊದಲನೇ ಹೊರಬೀಡು ಆರಂಭವಾಗಲಿದ್ದು, ಫೆ.೨೫ ಕ್ಕೆ ಎರಡನೇಯ ಹೊರಬೀಡು, ಮಾ.೧ ರಂದು ಮೂರನೇ ಹೊರಬೀಡು, ಮಾ.೪ ರಂದು ರಥದ ಬಗ್ಗೆ ಪೂಜಾರಿ, ಆಚಾರಿ ಮತ್ತು ಬಡಗಿಯವರಿಂದ ವೃಕ್ಷ ಪೂಜೆ, ಮಾ.೪ ರಂದು ಕೊನೆಯ ಹೊರಬೀಡು, ಮಾ.೮ ರಂದು ಶ್ರೀ ದೇವಿಯ ರಥದ ಮರ ತರುವುದು, ಮಾ.೮ ರಂದು ಅಂಕೆಯ ಹೊರಬೀಡು, ಮಾ.೯ ರಂದು ಅಂಕೆ ಹಾಕುವುದು, ಶ್ರೀ ದೇವಿಯ ವಿಗ್ರಹ ವಿಸರ್ಜನೆ ನಡೆಯಲಿದ್ದು, ಮಾ.೧೫ ರಿಂದ ಜಾತ್ರೆ ಕಾರ್ಯಕ್ರಮ ಆರಂಭವಾಗಲಿದೆ ಎಂದರು.
ನಂತರ ಏಪ್ರಿಲ್ ೨ ರಂದು ಬೆಳಿಗ್ಗೆ ಯುಗಾದಿ ದಿವಸದಂದು ಬೆಳಿಗ್ಗೆ ೮.೨೭ ಕ್ಕೆ ದೇವಿಯ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಲಿದೆ.
ಆರ್.ಜಿ.ನಾಯ್ಕ, ದೇವಸ್ಥಾನದ ಅಧ್ಯಕ್ಷ:
ಕರೋನಾ ಹಿನ್ನೆಲೆಯಲ್ಲಿ ಜಾತ್ರೆಯನ್ನು ವ್ಯವಸ್ಥಿತವಾಗಿ ನಡೆಸಲು ನಿರ್ಧರಿಸಿದ್ದು, ಜಾತ್ರೆಯ ಆಮಂತ್ರಣ ಪತ್ರಿಕೆಯನ್ನು ಮುಖ್ಯಮಂತ್ರಿ ಸೇರಿದಂತೆ ರಾಜ್ಯದ ವಿವಿಧ ಗಣ್ಯರಿಗೆ ಕಳಿಸಿಕೊಡಲಾಗುತ್ತದೆ. ವಿಐಪಿ ಪಾಸ್ ಗೊಂದಲ ಉಂಟಾಗಂತೆ ಮಾಡಲು ಈ ಬಾರಿ ವ್ಯವಸ್ಥಿತವಾಗಿ ಯೋಜನೆ ರೂಪಿಸಲಾಗಿದೆ.